ಮೊದಲು ಗೋರಕ್ಷಕರನ್ನು ನಿಷೇಧಿಸಿ: ಪ್ರಧಾನಿಗೆ ಉವೈಸಿ ಸವಾಲು
ಹೈದರಾಬಾದ್, ಸೆ.29: ಮೋದಿ ಸರ್ಕಾರಕ್ಕೆ ಅಲ್ಪಸಂಖ್ಯಾತರ ಸಬಲೀಕರಣದ ಬಗ್ಗೆ ನೈಜ ಕಳಕಳಿ ಇದ್ದರೆ, ಕೇಂದ್ರ ಸರ್ಕಾರ ಗೋರಕ್ಷಕರನ್ನು ಸಂಪೂರ್ಣವಾಗಿ ನಿಷೇಧಿಸಲಿ ಎಂದು ಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಸವಾಲು ಹಾಕಿದ್ದಾರೆ.
ಅಲ್ಪಸಂಖ್ಯಾತರನ್ನು ತಲುಪುವ ಸಲುವಾಗಿ ಕೇಂದ್ರ ಸರ್ಕಾರ ಪ್ರಗತಿ ಪಂಚಾಯತ್ ಯೋಜನೆಯನ್ನು ಆರಂಭಿಸಿದ ಬಗ್ಗೆ ಪಕ್ಷದ ಕೇಂದ್ರ ಕಚೇರಿಯಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ರೀತಿ ಪ್ರತಿಕ್ರಿಯಿಸಿದರು.
"ಪ್ರೋಗ್ರೆಸ್ ಪಂಚಾಯತ್ ಯೋಜನೆಗೆ ಅವರು ಚಾಲನೆ ನೀಡಿದ ಹರ್ಯಾಣದಲ್ಲೇ ಇಬ್ಬರು ಮುಸ್ಲಿಂ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ಇಬ್ಬರನ್ನು ಹತ್ಯೆ ಮಾಡಲಾಗಿದೆ. ಅವರು ಗೋಮಾಂಸ ಸೇವಿಸಿದ್ದಾಗಿ ಹೇಳಿದ್ದೇ ಅವರ ಹತ್ಯೆಗೆ ಕಾರಣ. ಬಿರಿಯಾನಿಯಲ್ಲಿ ಮಾಂಸವನ್ನು ತಡೆಯುವ ಹೆಸರಿನಲ್ಲಿ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದೆ. ಸರ್ಕಾರಕ್ಕೆ ಸಾಧ್ಯವಿದ್ದರೆ ಗುರುಗಾಂವ್‌ನಲ್ಲಿರುವ ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ಮಾಡಲಿ" ಎಂದು ಸವಾಲೆಸೆದರು.
ಅಲ್ಪಸಂಖ್ಯಾತರ ಸಬಲೀಕರಣ ಮೂಲಕ ಮೋದಿ ಸರ್ಕಾರ, ನಮ್ಮ ಸಮುದಾಯಕ್ಕೆ ಯಾವುದೇ ನೆರವು ನೀಡುತ್ತಿಲ್ಲ. ಅದು ಸಂವಿಧಾನಾತ್ಮಕ ಕರ್ತವ್ಯ. ಮುಸ್ಲಿಮರಿಗೆ ಶೇಕಡ 5 ಮೀಸಲಾತಿ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದ್ದರೂ, ಬಿಜೆಪಿ ಸರ್ಕಾರ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಆದರೆ ಹರ್ಯಾಣ, ರಾಜಸ್ಥಾನದಲ್ಲಿ ಆರ್ಥಿಕವಾಗಿ ಬಡವರು ಎಂಬ ಕಾರಣಕ್ಕೆ ಜಾಟ್ ಸಮುದಾಯಕ್ಕೆ ಮೀಸಲಾತಿ ಒದಗಿಸಲಾಗಿದೆ. ಗುಜರಾತ್‌ನಲ್ಲಿ ಪಟೇಲರಿಗೆ ಈ ಸೌಲಭ್ಯ ನೀಡಲಾಗಿದೆ ಎಂದು ಚುಚ್ಚಿದರು.
ಈ ಯೋಜನೆಯನ್ನು ಕೇಂದ್ರ ಸರ್ಕಾರ, ಕಾಶ್ಮೀರದಲ್ಲಿ ಆರಂಭಿಸಬೇಕಿತ್ತು. ಆದರೆ ಕೇಂದ್ರದ ಆದ್ಯತೆಯೇ ಸರಿ ಇಲ್ಲ. ಮುಸ್ಲಿಮರನ್ನು ಸಬಲೀಕರಣ ಮಾಡುವುದಾಗಿ ಹೇಳುವ ಮೋದಿ, ಅಲಿಗಢ ವಿಶ್ವವಿದ್ಯಾನಿಲಯಕ್ಕೆ ಅಲ್ಪಸಂಖ್ಯಾತ ಸೌಲಭ್ಯ ಒದಗಿಸುವುದಕ್ಕೆ ಏಕೆ ಅಪಸ್ವರ ಎತ್ತುತ್ತಿದ್ದಾರೆ ಎಂದು ಪ್ರಶ್ನಿಸಿದರು.