ದಾದ್ರಿಯ ಅಖ್ಲಾಕ್ ಕೊಲೆ ಆರೋಪಿ ನ್ಯಾಯಾಂಗ ಬಂಧನದಲ್ಲಿ ಸಾವು

Update: 2016-10-05 05:52 GMT

ಹೊಸದಿಲ್ಲಿ, ಅ.5: ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸೇವಿಸಿದ ವದಂತಿ ಹಿನ್ನೆಲೆಯಲ್ಲಿ ಹತ್ಯೆಗೊಳಗಾಗಿದ್ದ ಮುಹಮ್ಮದ್ ಅಖ್ಲಾಕ್ ಕೊಲೆ ಆರೋಪಿ ನ್ಯಾಯಾಂಗ ಬಂಧನದಲ್ಲಿರುವಾಗ ದಿಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಬಿನ್ ಅಲಿಯಾಸ್ ರವಿ (20) ಯನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರವಿ ಕಿಡ್ನಿ ವೈಫಲ್ಯ ಹಾಗೂ ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಈತನ ಕುಟುಂಬದ ಸದಸ್ಯರು ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.

 ಅಧಿಕ ಸಕ್ಕರೆ ಅಂಶ ಹಾಗೂ ಮೂತ್ರಪಿಂಡ ವೈಫಲ್ಯ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಆತನನ್ನು ಆಸ್ಪತ್ರೆಗೆ ಕರೆ ತರಲಾಗಿದೆ. ರಾತ್ರಿ 7ರ ಸುಮಾರಿಗೆ ಮೃತಪಟ್ಟಿದ್ದಾನೆ ಎಂದು ಎಲ್‌ಎನ್‌ಜೆಪಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಜೆ.ಸಿ.ಪಸ್ಸೆ ಪ್ರಕಟಿಸಿದ್ದಾರೆ.

ಆದರೆ ನೊಯ್ಡಾ ಜೈಲಿನಲ್ಲಿ ಅತಿಯಾಗಿ ಹೊಡೆದು ಪೊಲೀಸರೇ ಆತನ ಸಾವಿಗೆ ಕಾರಣರಾಗಿದ್ದಾರೆ ಎಂದು ಕುಟುಂಬದ ಸದಸ್ಯರು ದೂರಿದ್ದಾರೆ. ಈ ಬಗ್ಗೆ ಹಿಂದೆ ದೂರನ್ನೂ ದಾಖಲಿಸಲಾಗಿತ್ತು. ಜೈಲು ಅಧಿಕಾರಿಗಳೇ ಈತನ ಸಾವಿಗೆ ಹೊಣೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿನ ಕಾರಣ ಬುಧವಾರ ನಡೆಯುವ ಮರಣೋತ್ತರ ಪರೀಕ್ಷೆಯಿಂದ ಬಹಿರಂಗವಾಗಬೇಕಿದೆ. ಬೆಳಗ್ಗೆ ಜೈಲಿನಿಂದ ಆತನನ್ನು ನೊಯ್ಡಾ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ದಿಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News