×
Ad

ಜಯಲಲಿತಾ ಚಿಕಿತ್ಸೆಗೆ ಏಮ್ಸ್ ಆಸ್ಪತ್ರೆಯ ವೈದ್ಯರ ತಂಡ ಚೆನ್ನೈ ಗೆ ಆಗಮನ

Update: 2016-10-06 11:23 IST

ಚೆನ್ನೈ, ಅ.6: ಹೊಸದಿಲ್ಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ಮೂವರು ತಜ್ಞ ವೈದ್ಯರ ತಂಡ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೊಲೊ ಆಸ್ಪತ್ರೆಗೆ ಗುರುವಾರ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏಮ್ಸ್ ಆಸ್ಪತ್ರೆಯ ವೈದ್ಯರುಗಳಾದ ಡಾ. ಜಿಸಿ ಖೈಲ್‌ನಾನಿ, ಡಾ. ನಿತೀಶ್ ನಾಯಕ್ ಹಾಗೂ ಡಾ. ಅಂಜನ್ ಟ್ರಿಖಾ ಅವರು ಜಯಲಲಿತಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡಕ್ಕೆ ಸಲಹೆ-ಸೂಚನೆ ನೀಡಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

‘‘ವೈದ್ಯರ ರೌಂಡ್ಸ್ ಬಳಿಕ ನಾವು ಸಿಎಂ ಜಯಲಲಿತಾರ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಸಾಧ್ಯ’’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಜಯಲಲಿತಾ ಸೆ.22 ರಂದು ಜ್ವರ ಹಾಗೂ ದೇಹದಲ್ಲಿ ನೀರಿನ ಅಂಶ ಕಡಿಮೆ ಇದ್ದ ಕಾರಣ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.ಲಂಡನ್‌ನ ಸೈಂಟ್ ಥಾಮಸ್ ಹಾಸ್ಪಿಟಲ್‌ನ ಐಸಿಎಂ ವಿಭಾಗದ ತಜ್ಞ ಡಾ. ರಿಚರ್ಡ್ ಬಿಲೆ ಜಯಲಲಿತಾರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರುಗಳ ತಂಡಕ್ಕೆ ಸಲಹೆ ನೀಡುತ್ತಿದ್ದಾರೆ.

ರಾಮಸ್ವಾಮಿ ಅರ್ಜಿ ವಜಾ: ಜಯಲಲಿತಾರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಸರಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಟ್ರಾಫಿಕ್ ರಾಮಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

ಜಯಲಲಿತಾರ ಆರೋಗ್ಯದ ಬಗ್ಗೆ ದಿನಕ್ಕೊಂದು ಸುದ್ದಿ ಬರುವ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಮದ್ರಾಸ್ ಹೈಕೋರ್ಟ್‌ಗೆ ಮುಖ್ಯಮಂತ್ರಿಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News