ಇಂದು ನ್ಯೂಝಿಲೆಂಡ್ ವಿರುದ್ಧ ಮೂರನೆ ಟೆಸ್ಟ್ ಆರಂಭ

Update: 2016-10-07 18:17 GMT

ಇಂದೋರ್, ಅ.7: ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡು, ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿರುವ ಭಾರತ ತಂಡ ಶನಿವಾರ ಇಲ್ಲಿ ಆರಂಭವಾಗಲಿರುವ ಮೂರನೆ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಮತ್ತೊಮ್ಮೆ ಸ್ವದೇಶದಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವ ಗುರಿ ಹಾಕಿಕೊಂಡಿದೆ.

 ಭಾರತ ತಂಡ ಸ್ವದೇಶಿ ಸರಣಿಯಲ್ಲಿ 2012-13ರಲ್ಲಿ ಆಸ್ಟ್ರೇಲಿಯ ವಿರುದ್ಧ 4-0 ಅಂತರದಿಂದಲೂ, 2013-14ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 2-0 ಹಾಗೂ ಕಳೆದ ವರ್ಷ ದಕ್ಷಿಣ ಆಫ್ರಿಕ ವಿರುದ್ಧ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದ್ದು ಕಿವೀಸ್ ವಿರುದ್ಧ ಅದೇ ರೀತಿಯ ಪ್ರದರ್ಶನ ಪುನರಾವರ್ತಿಸುವ ವಿಶ್ವಾಸದಲ್ಲಿದೆ.

 ಈ ಎಲ್ಲ ಸರಣಿಯಲ್ಲಿ ಸ್ಪಿನ್ನರ್ ಆರ್.ಅಶ್ವಿನ್ ಪ್ರಾಬಲ್ಯ ಸಾಧಿಸಿದ್ದಾರೆ. ಸ್ವದೇಶದಲ್ಲಿ ಈ ವರೆಗೆ ನಡೆದಿರುವ 12 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 86 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅಶ್ವಿನ್ ಇತ್ತೀಚೆಗಷ್ಟೇ ಅತ್ಯಂತ ವೇಗವಾಗಿ 200 ವಿಕೆಟ್ ಪೂರೈಸಿದ ಸಾಧನೆ ಮಾಡಿದ್ದರು.

ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿದೆ. ಸ್ವದೇಶದಲ್ಲಿ ಈ ತನಕ ಆಡಿರುವ 13 ಟೆಸ್ಟ್ ಪಂದ್ಯಗಳ ಪೈಕಿ 11ರಲ್ಲಿ ಜಯ, ಎರಡರಲ್ಲಿ ಡ್ರಾ ಸಾಧಿಸಿ ಅಜೇಯವಾಗುಳಿದಿರುವ ಭಾರತವನ್ನು ಕಿವೀಸ್ ಪಡೆ ಕಟ್ಟಿಹಾಕಬಹುದೇ ಎನ್ನುವುದು ಸದ್ಯದ ಕುತೂಹಲ.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿರುವ ಭಾರತ ಮೂರನೆ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಕಿವೀಸ್ ಪಡೆಗೆ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಸಿಂಹಸ್ವಪ್ನವಾಗಿದ್ದಾರೆ. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಕಳೆದೆರಡು ಪಂದ್ಯಗಳಲ್ಲಿ ಕಿವೀಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು.

ನ್ಯೂಝಿಲೆಂಡ್ ಸ್ಪಿನ್ನರ್‌ಗಳು ಭಾರತದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಲು ವಿಫಲರಾಗಿದ್ದಾರೆ.

ಟೀಮ್ ನ್ಯೂಸ್: ಭಾರತ: ಕೆಎಲ್ ರಾಹುಲ್ ಬಳಿಕ ಭಾರತದ ಇನ್ನಿಬ್ಬರು ಆಟಗಾರರು ಗಾಯಗೊಂಡಿದ್ದಾರೆ. ಶಿಖರ್ ಧವನ್(ಎಡಹೆಬ್ಬೆರಳು ಬಿರುಕು) ಹಾಗೂ ಭುವನೇಶ್ವರ ಕುಮಾರ್(ಬೆನ್ನುನೋವು) ಮೂರನೆ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಈ ಇಬ್ಬರ ಪೈಕಿ ಭುವನೇಶ್ವರ್ ಕುಮಾರ್ ಅನುಪಸ್ಥಿತಿ ಭಾರತದ ಪ್ರದರ್ಶನದ ಮೇಲೆ ಪರಿಣಾಮಬೀರಲಿದೆ. ಭುವಿ 2ನೆ ಟೆಸ್ಟ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದ್ದರು.

  ಭುವಿ ಬದಲಿಗೆ ಶಾರ್ದೂಲ್ ಠಾಕೂರ್ ತಂಡವನ್ನು ಸೇರ್ಪಡೆಯಾಗಿದ್ದಾರೆ. ಆದರೆ, ಅವರಿಗೆ ಅಂತಿಮ 11ರ ಬಳಗದಲ್ಲಿ ಸ್ಥಾನ ಲಭಿಸುವ ಸಾಧ್ಯತೆಯಿಲ್ಲ. ಠಾಕೂರ್ ಅವರು ಉಮೇಶ್ ಯಾದವ್‌ರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.

ಧವನ್ ಗಾಯಗೊಂಡಿರುವ ಕಾರಣ ಹಿರಿಯ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ 2014ರ ಬಳಿಕ ಗಂಭೀರ್ ಮೊದಲ ಬಾರಿ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದ್ದಾರೆ. ಭಾರತದ ಇಬ್ಬರು ಪ್ರಮುಖ ಆರಂಭಿಕ ಆಟಗಾರರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಗಂಭೀರ್‌ಗೆ ಮುರಳಿ ವಿಜಯ್‌ರೊಂದಿಗೆ ಇನಿಂಗ್ಸ್ ಆರಂಭಿಸುವ ಉತ್ತಮ ಅವಕಾಶ ಲಭಿಸಿದೆ.

ನ್ಯೂಝಿಲೆಂಡ್: ಜ್ವರದಿಂದಾಗಿ 2ನೆ ಟೆಸ್ಟ್‌ನಿಂದ ವಂಚಿತರಾಗಿದ್ದ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಗುರುವಾರ ನೆಟ್‌ಪ್ರಾಕ್ಟೀಸ್ ನಡೆಸಿದ್ದು, 3ನೆ ಟೆಸ್ಟ್‌ಗೆ ವಾಪಸಾಗಲು ಸಜ್ಜಾಗಿದ್ದಾರೆ. ಮಾರ್ಟಿನ್ ಗಪ್ಟಿಲ್ ಕಳಪೆ ಪ್ರದರ್ಶನ ಮುಂದುವರಿಸಿದ್ದರೂ ಕಿವೀಸ್ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡುವ ಲಕ್ಷಣವಿಲ್ಲ. ಮತ್ತೊಮ್ಮೆ ಅದೇ ತಂಡಕ್ಕೆ ಅವಕಾಶ ನೀಡಬಹುದು.

ಪಿಚ್ ಹಾಗೂ ವಾತಾವರಣ

ಸುಮಾರು 28,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಭೋಪಾಲ್‌ನ ಹೋಳ್ಕರ್ ಸ್ಟೇಡಿಯಂ ಇದೇ ಮೊದಲ ಬಾರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಂಡಿದೆ. ಈ ಸ್ಟೇಡಿಯಂನಲ್ಲಿ ಈವರೆಗೆ 4 ಏಕದಿನ ಪಂದ್ಯಗಳು ಹಾಗೂ ಎರಡು ಟ್ವೆಂಟಿ-20 ಪಂದ್ಯಗಳು ನಡೆದಿವೆ. ಪಿಚ್ ಹೆಚ್ಚು ಬೌನ್ಸ್‌ನಿಂದ ಕೂಡಿದ್ದು, ವೇಗದ ಬೌಲರ್‌ಗಳಿಗೆ ಹಾಗೂ ಬ್ಯಾಟ್ಸ್‌ಮನ್‌ಗಳಿಗೆ ಫೇವರಿಟ್ ಆಗಿದೆ.

ಅಂಕಿ-ಅಂಶ

*ವಿರಾಟ್ ಕೊಹ್ಲಿ ಸ್ವದೇಶದಲ್ಲಿ ಆಡಿದ ಎಲ್ಲ ಆರು ಪಂದ್ಯಗಳಲ್ಲಿ ಟಾಸ್ ಜಯಿಸಿದ್ದಾರೆ.

* ಭಾರತ ಸ್ವದೇಶದಲ್ಲಿ ಈ ತನಕ ಆಡಿರುವ 13 ಟೆಸ್ಟ್ ಪಂದ್ಯಗಳಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದೆ. 11ರಲ್ಲಿ ಜಯ ಹಾಗೂ 2ರಲ್ಲಿ ಸೋಲುಂಡಿದೆ.

*ಹೋಳ್ಕರ್ ಸ್ಟೇಡಿಯಂ ಕ್ಯುರೇಟರ್ ಸಮಂದರ್ ಸಿಂಗ್ ಚೌಹಾಣ್ ಏಕದಿನ ಕ್ರಿಕೆಟ್‌ನಲ್ಲಿ ಮೊತ್ತ ಮೊದಲ ಬಾರಿ ಎರಡು ಬಾರಿ ದ್ವಿಶತಕಕ್ಕೆ ಸಾಕ್ಷಿಯಾದ ಪಿಚ್‌ನ್ನು ರೂಪಿಸಿದ್ದರು. ಗ್ವಾಲಿಯರ್‌ನಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ಗ್ವಾಲಿಯರ್‌ನಲ್ಲಿ ವೀರೇಂದ್ರ ಸೆಹ್ವಾಗ್ ಚೌಹಾಣ್ ರಚಿಸಿದ್ದ ಪಿಚ್‌ನಲ್ಲಿ ದ್ವಿಶತಕ ಬಾರಿಸಿದ್ದರು.

*ಕಿವೀಸ್‌ನ ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್ ಹಾಗೂ ಬಿಜೆ ವಾಟ್ಲಿಂಗ್ ಪ್ರಸ್ತುತ ಟೆಸ್ಟ್ ಸರಣಿಯಲ್ಲಿ 20ಕ್ಕಿಂತ ಕಡಿಮೆ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಸಂಭಾವ್ಯ ತಂಡ: ಭಾರತ:

ಗೌತಮ್ ಗಂಭೀರ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ದಿಮಾನ್ ಸಹಾ, ರವೀಂದ್ರ ಜಡೇಜ, ಅಶ್ವಿನ್, ಉಮೇಶ್ ಯಾದವ್/ಶಾರ್ದೂಲ್ ಠಾಕೂರ್, ಮುಹಮ್ಮದ್ ಶಮಿ.

ನ್ಯೂಝಿಲೆಂಡ್: ಟಾಮ್ ಲಥಾಮ್, ಮಾರ್ಟಿನ್ ಗಪ್ಟಿಲ್/ಹೆನ್ರಿ ನಿಕೊಲ್ಸ್, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಲೂಕ್ ರಾಂಚಿ, ಮಿಚೆಲ್ ಸ್ಯಾಂಟ್ನರ್, ಬಿಜೆ ವಾಟ್ಲಿಂಗ್, ಮ್ಯಾಟ್ ಹೆನ್ರಿ, ಜೀತನ್ ಪಟೇಲ್, ನೀಲ್ ವಾಗ್ನರ್, ಟ್ರೆಂಟ್ ಬೌಲ್ಟ್.

ಪಂದ್ಯ ಆರಂಭದ ಸಮಯ: ಬೆಳಗ್ಗೆ 9:30

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News