ಸಣ್ಣ ನಗರಗಳಲ್ಲಿ ಟೆಸ್ಟ್ ಪಂದ್ಯ: ಠಾಕೂರ್ ಇಂಗಿತ
Update: 2016-10-08 23:24 IST
ಇಂದೋರ್, ಅ.8: ‘‘ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ 3ನೆ ಟೆಸ್ಟ್ ಪಂದ್ಯವನ್ನು ಇಂದೋರ್‌ನಲ್ಲಿ ಆಯೋಜಿಸಿರುವುದು ಉತ್ತಮ ಪ್ರಯೋಗ. ಸಣ್ಣ ನಗರಗಳಲ್ಲಿ ಟೆಸ್ಟ್ ಪಂದ್ಯಗಳನ್ನು ನಡೆಸುವ ಪ್ರಕ್ರಿಯೆ ಮುಂದುವರಿಸಲಾಗುವುದು’’ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
‘‘ಸಣ್ಣ ನಗರಗಳಲ್ಲಿ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಬಗ್ಗೆ ನಾವು ಉಪಕ್ರಮ ಕೈಗೊಳ್ಳುತ್ತಿದ್ದು, ಇಂದೋರ್‌ನಲ್ಲಿ ಟೆಸ್ಟ್ ಆಯೋಜಿಸುವ ನಮ್ಮ ಉದ್ದೇಶ ಫಲ ನೀಡಿದೆ. ಮುಂದಿನ ದಿನಗಳಲ್ಲಿ ಇಂದೋರ್‌ನಂತಹ ಚಿಕ್ಕ ನಗರಗಳಲ್ಲಿ 5 ದಿನಗಳ ಪಂದ್ಯ ನಡೆಸಲಾಗುತ್ತದೆ’’ಎಂದು ಇಂಡೋ-ಕಿವೀಸ್ ನಡುವಿನ 3ನೆ ಟೆಸ್ಟ್ ಆರಂಭಕ್ಕೆ ಮೊದಲು ಠಾಕೂರ್ ಹೇಳಿದ್ದಾರೆ.
ಇಂದೋರ್ ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ಟೆಸ್ಟ್ ಪಂದ್ಯ ಆಯೋಜಿಸುವ ಪ್ರಯತ್ನಕ್ಕೆ ಕೈ ಹಾಕಿದ್ದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯನ್ನು ಠಾಕೂರ್ ಶ್ಲಾಘಿಸಿದ ಠಾಕೂರ್, ಎಂಪಿಸಿಎ ಅದ್ಭುತ ಕೆಲಸ ಮಾಡಿದೆ ಎಂದರು.