ಏಸುಕ್ರಿಸ್ತ, ಮತ್ತು ಪ್ರವಾದಿ(ಸ) ಗೋಸಂರಕ್ಷಣಾವಾದಿಗಳು: ಗುಜರಾತ್ ಗೋಸೇವಾ ಬೋರ್ಡ್
ಅಹ್ಮದಾಬಾದ್, ಅಕ್ಟೋಬರ್ 13: ಯೇಸುಕ್ರಿಸ್ತಮತ್ತು ಪ್ರವಾದಿ ಮುಹಮ್ಮದರು(ಸ) ಗೋರಕ್ಷಾ ವಾದಿಗಳಾಗಿದ್ದರು ಎಂದು ಗುಜರಾತ್‌ನ ಗೋಸೇವಾ ಗೋಚರ್ ವಿಕಾಸ್ ಬೋರ್ಡ್ ಹೇಳಿದೆ. ಬೋರ್ಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗೋವಂದನ ಕಾರ್ಯಸರಿತ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಲೇಖನದಲ್ಲಿ ಪ್ರವಾದಿ(ಸ) ಮತ್ತು ಯೇಸು ಕ್ರಿಸ್ತರನ್ನು ಉದ್ಧರಿಸಿ ಗೋಸಂರಕ್ಷಣೆಗೆ ಸಂಬಂಧಿಸಿದ ಪರಾಮರ್ಶೆಗಳಿವೆ. ಗೋಸಂರಕ್ಷಣೆಗೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳ ಪಟ್ಟಿಯಲ್ಲಿ ಇವರನ್ನು ಉದ್ಧರಿಸಲಾಗಿದೆ ಎಂದು ವರದಿಯಾಗಿದೆ.
ಗೋವಿನ ಕರುಗಳನ್ನು ಕೊಲ್ಲುವುದು ಮನುಷ್ಯನನ್ನು ಕೊಲ್ಲುವುದಕ್ಕೆ ಸಮಾನವೆಂದು ಯೇಸುಕ್ರಿಸ್ತ ಹೇಳಿದ್ದಾರೆ ಎಂದು ಲೇಖನದಲ್ಲಿ ಬರೆಯಲಾಗಿದ್ದರೆ" ಗೋವುಗಳನ್ನು ಗೌರವಿಸಬೇಕು. ಕಾರಣ ಅವು ಪ್ರಾಣಿಗಳಲ್ಲಿ ವಿಶಿಷ್ಟವಾಗಿವೆ. ಗೋವು ನೀಡುವ ಹಾಲು, ತುಪ್ಪ ಅಮೃತಸಮಾನವಾಗಿದೆ.ಗೋಮಾಂಸ ಸೇವನೆ ರೋಗಕ್ಕೆ ಪ್ರಧಾನ ಕಾರಣವಾಗಲಿದೆ" ಎಂದು ಪ್ರವಾದಿ(ಸ) ಹೇಳಿರುವುದಾಗಿ ಲೇಖನದಲ್ಲಿದೆ ಎನ್ನಲಾಗಿದೆ.
ಆದರೆ ಇದು ಆಧಾರರಹಿತ ಉದ್ಧರಣೆಗಳಾಗಿವೆ ಎಂದು ಹಲವಾರು ಮಂದಿ ಹೇಳಿದ್ದಾರೆ. ಅರೇಬಿಯದಲ್ಲಿ ಪ್ರವಾದಿ ಮುಹಮ್ಮದ್(ಸ) ಜೀವಿಸಿದ್ದರು ಅಲ್ಲಿ ಗೋವುಗಳನ್ನು ಜೀವನದಲ್ಲೆಂದೂ ಕಂಡಿರಲಾರರು ಆದ್ದರಿಂದ ಇಂತಹ ಪರಾಮರ್ಶೆಗಳು ಆಧಾರರಹಿತವಾದುದು ಎಂದು ಜಮೀಯತ್ ಉಲಮಾ ಹಿಂದ್ ಗುಜರಾತ್ ಘಟಕದಿ ಪ್ರಧಾನಕಾರ್ಯದರ್ಶಿ ಮುಫ್ತಿ ಅಬ್ದುಲ್ ಖಯ್ಯೂಮ್ ಹಕ್ ಪ್ರತಿಕ್ರಿಯಿಸಿದ್ದಾರೆ.
ಯೇಸುಕ್ರಿಸ್ತ ಎಲ್ಲ ಜೀವಜಾಲಗಳೊಂದಿಗೆ ಅನುಕಂಪ ತೋರಿಸಬೇಕೆಂದು ಹೇಳಿದ್ದಾರೆ. ಅದಲ್ಲದೆ ಗೋವಿನ ಕುರಿತು ಪ್ರತ್ಯೇಕವಾಗಿ ಏನೂ ಹೇಳಿಲ್ಲ ಎಂದು ಸೇಂಟ್ ಝೇವಿಯರ್ ಲಯೋಲ ಹಾಲ್ ಹೈಸ್ಕೂಲ್ ಪ್ರಿನ್ಸಿಪಾಲ್ ಫಾ. ಎಫ್. ದುರೈ ಹೇಳಿದ್ದಾರೆ.
ನಾವು ವಿಶ್ವಾಸನೀಯ ದಾಖಲೆಗಳಿಂದ ಏಸುಕ್ರಿಸ್ತರು ಮತ್ತು ಪ್ರವಾದಿ(ಸ)ರ ಹೇಳಿಕೆಗಳನ್ನು ಪಡೆದಿದ್ದೇವೆ. ಇದರ ಮೂಲಕ ಬೀಫ್ ಬಳಕೆಯನ್ನು ಕಡಿಮೆಗೊಳಿಸಲು ಗೋವಧೆ ತಡೆಯುವುದು ಉದ್ದೇಶವಾಗಿದೆ ಎಂದು ಗೋಸೇವಾ ಬೋರ್ಡ್ ಚೇರ್‌ಮೆನ್ ವಲ್ಲಭ್ ಕಟೀರಿಯ ಹೇಳಿದ್ದಾರೆಂದು ವರದಿ ತಿಳಿಸಿದೆ.