ಲಿಖಿತ ಪರೀಕ್ಷೆಯನ್ನು ಮುಂದೂಡಿ
ಮಾನ್ಯರೆ,
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಈ ಮೊದಲು ದೈಹಿಕ ಪರೀಕ್ಷೆ ನಡೆಸಿ ನಂತರದಲ್ಲಿ ಲಿಖಿತ ಪರೀಕ್ಷೆ ನಡೆಸುತ್ತಿದ್ದರು. ಆದರೆ ಈ ಬಾರಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3,477 ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ ಮತ್ತು 1,834 ಸಶಸ್ತ್ರ ಪಡೆಗಳ ಕಾನ್‌ಸ್ಟೇಬಲ್ ನೇಮಕಾತಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತಿದೆ.
ಅರ್ಜಿ ಸಲ್ಲಿಸಲು ಸೆ. 21ರಿಂದ ಅ.17ರವರಿಗೆ 27 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಓದಲು ಒಂದಿಷ್ಟು ಸಮಯವಿದೆ ಅಂದುಕೊಳ್ಳುವಾಗಲೇ ಮುಂದಿನ ತಿಂಗಳ ನವೆಂಬರ್ 10ನೆ ತಾರೀಖು ಲಿಖಿತ ಪರೀಕ್ಷೆ ನಡೆಸಲು ಸರಕಾರ ನಿರ್ಧರಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಕೊನೆಯ ದಿನಾಂಕದಿಂದ ಲಿಖಿತ ಪರೀಕ್ಷೆ ನಡೆಸುತ್ತ್ತಿರುವ ದಿನಾಂಕದ ನಡುವಿನ ಅಂತರ ಕೇವಲ 20 ರಿಂದ 22 ದಿನಗಳು ಮಾತ್ರ ಇರುವುದರಿಂದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಓದಲು ಸಮಯ ಇಲ್ಲದೆ ಆತಂಕದಲ್ಲಿದ್ದಾರೆ.
ಆದ್ದರಿಂದ ದಯವಿಟ್ಟು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆಯನ್ನು ಡಿಸೆಂಬರ್ ಮೊದಲ ವಾರದಲ್ಲಿ ನಡೆಸುವಂತೆ ಮಾನ್ಯ ಗೃಹ ಮಂತ್ರಿಗಳು ಆದೇಶ ಹೊರಡಿಸಿ ಅಭ್ಯರ್ಥಿಗಳಿಗೆ ಓದಲು ಅವಕಾಶ ಮಾಡಿಕೊಡಬೇಕಾಗಿದೆ. ಈ ಕುರಿತು ಸರಕಾರ ಗಂಭೀರವಾಗಿ ಚಿಂತಿಸಲಿ.