‘ಚೈನೀಸ್ ಮೆಹೆಂದಿ ಅನಾಹುತ’ ವೈರಲ್ ಫೋಟೋಗಳ ಹಿಂದಿನ ಸತ್ಯ ಇಲ್ಲಿದೆ

Update: 2016-10-25 05:58 GMT

ಹೊಸದಿಲ್ಲಿ, ಅ.25: ಮದುವೆ ಮುಂತಾದ ಸಮಾರಂಭಗಳು ಹಾಗೂ ಹಬ್ಬದ ಸಂದರ್ಭ ಮೆಹೆಂದಿ ಹಚ್ಚುವುದು ಭಾರತೀಯ ಸಂಪ್ರದಾಯ. ಹಿಂದೂಗಳ ಹಬ್ಬವಾದ ದೀಪಾವಳಿ ಹಾಗೂ ಕರ್ವಾ ಚೌತ್ ಗೆ ಇನ್ನು ಕೆಲವೇ ದಿನಗಳು ಬಾಕಿ. ಅನೇಕ ಹೆಂಗಳೆಯರು ಈ ಸಂದರ್ಭ ಮೆಹೆಂದಿ ಹಚ್ಚಲು ಮಾರುಕಟ್ಟೆಗೆ ಧಾವಿಸಿ ಅಲ್ಲಿ ಸಿಗುವ ರೆಡಿಮೇಡ್ ಮೆಹೆಂದಿ ಪೇಸ್ಟ್ ಖರೀದಿಸುತ್ತಾರೆ.

ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಫೋಟೊಗಳು ಕಾಣಿಸಿಕೊಂಡು ಮಾರುಕಟ್ಟೆಯಲ್ಲಿ ಕೊಂಡುಕೊಂಡಂತಹ ಮೆಹೆಂದಿಗಳನ್ನು ಕೈಗೆ ಹಚ್ಚಿದ ನಂತರ ಉಂಟಾದ ಅಡ್ಡ ಪರಿಣಾಮಗಳ ಬಗ್ಗೆ ವಿವರಿಸಲಾಗಿತ್ತು. ಇದು ಹಲವರ ಕಳವಳಕ್ಕೂ ಕಾರಣವಾಗಿತ್ತಲ್ಲದೆ. ಈ ನಿರ್ದಿಷ್ಟ ಮೆಹೆಂದಿ ಚೀನಾ ನಿರ್ಮಿತವಾಗಿತ್ತೆಂಬ ಸುದ್ದಿಯೂ ಹಬ್ಬಿತ್ತು.

ಇದು ಗಂಭೀರ ವಿಚಾರವಾದರೂ ಇಲ್ಲಿ ಗಮನಿಸ ತಕ್ಕ ಅಂಶವೆಂದರೆ ನಾವು ಹೆಚ್ಚಾಗಿ ಉಪಯೋಗಿಸುವ ಹೆನ್ನಾ ಉತ್ಪನ್ನಗಳು, ಹೇರ್ ಡೈಗಳಲ್ಲಿ ಕೂಡ ಹಾನಿಕಾರಕ ರಾಸಾಯನಿಕಗಳಿವೆಯೆಂದು ಹೇಳುತ್ತಾರೆ ಪ್ರೈವಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಚರ್ಮರೋಗ ತಜ್ಞೆಯಾಗಿರುವ ಡಾ.ಸೋಫಿಯಾ ಜಗ್ಲನ್ ಅವರು. ಈ ಹಾನಿಕಾರಕ ರಾಸಾಯನಿಕಗಳು ಅಮೋನಿಯಾ-ಫ್ರೀ ಹಾಗೂ ನೈಸರ್ಗಿಕ ಹೇರ್ ಕಲರ್ ಎಂದು ಹೇಳಲಾಗುವ ಉತ್ಪನ್ನಗಳಲ್ಲಿಯೂ ಇರುತ್ತದೆ ಎಂದು ಹೇಳುವ ಅವರು, ಮದುವೆಯಾದ ಮಹಿಳೆಯರು ಸಾಮಾನ್ಯವಾಗಿ ಹಣೆಗೆ ಹಚ್ಚುವ ಸಿಂಧೂರದಲ್ಲಿ ಕೂಡ ಸೀಸ ಮುಂತಾದ ಅಲರ್ಜಿಕಾರಕ ವಸ್ತುಗಳಿರುತ್ತವೆ ಎಂದು ವಿವರಿಸುತ್ತಾರೆ.

ಮೇಲೆ ತಿಳಿಸಲಾದಂತಹ ಉತ್ಪನ್ನಗಳಲ್ಲಿ ಶೇ.90ರಷ್ಟು ಉತ್ಪನ್ನಗಳಲ್ಲಿ ಪ್ಯಾರಾಫಿನೈಲಿನ್ ಡೈಯಮೈನ್, ಫಿನೈಲ್ ಮರ್ಕ್ಯೂರಿಕ್ ನೈಟ್ರೇಟ್, ಪೊಟಾಶಿಯಂ ಡೈಕ್ರೊಮೇಟ್ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇಂತಹ ಉತ್ಪನ್ನಗಳಲ್ಲಿರುವ ಇತರ ಹಾನಿಕಾರಕ ಅಂಶಗಳೆಂದರೆ ಕೊಬಾಲ್ಟ್‌ಕ್ಲೋರೈಡ್, ಕೊಲೊಫೊನಿ, ಪ್ಯಾರಾಬೆನ್ ಮಿಕ್ಸ್ ಹಾಗೂ ಕ್ವಾಟೆರ್ನಿಯ 15. ನಾವು ಖರೀದಿಸುವ ಉತ್ಪನ್ನಗಳ ಪ್ಯಾಕೆಟ್ಟುಗಳಲ್ಲಿ ಅವುಗಳನ್ನು ತಯಾರಿಸಲು ಬಳಸಲಾದ ವಿವಿಧ ವಸ್ತುಗಳ ಬಗ್ಗೆ ಗಮನ ನೀಡುವುದೇ ಇದಕ್ಕಿರುವ ಒಂದು ಉಪಾಯ. ಆದರೆ ರಸ್ತೆ ಬದಿ ಮಾರಾಟಗಾರರಿಂದ ಖರೀದಿಸಲಾಗುವ ಮೆಹೆಂದಿಗಳಲ್ಲಿ ಏನು ಬಳಸಲಾಗುತ್ತಿವೆ ಎಂಬ ಬಗ್ಗೆ ಮಾಹಿತಿಯಿರುವುದಿಲ್ಲ’’ ಎಂದು ಹೇಳಿದ ಡಾ. ಜಗ್ಲನ್ ಅದೇ ಸಮಯ ಇಂತಹ ಅಲರ್ಜಿಗಳಿಗೆ ಅವುಗಳ ತೀವ್ರತೆಗನುಗುಣವಾಗಿಸೂಕ್ತ ಚಿಕಿತ್ಸೆ ಲಭ್ಯವಿದೆ ಎಂದು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News