ನಾಲ್ಕು ವಾರಗಳಲ್ಲಿ ವಿದೇಶಿ ಆಸ್ತಿಗಳನ್ನು ಘೋಷಿಸುವಂತೆ ವಿಜಯ ಮಲ್ಯಗೆ ಸರ್ವೋಚ್ಚ ನ್ಯಾಯಾಲಯ ತಾಕೀತು
ಹೊಸದಿಲ್ಲಿ,ಅ.25: ಮಾಜಿ ಮದ್ಯದ ದೊರೆ ವಿಜಯ ಮಲ್ಯ ಅವರು ತನ್ನ ಆಸ್ತಿಗಳನ್ನು ಸೂಕ್ತವಾಗಿ ಘೋಷಿಸಿಲ್ಲ ಎಂದು ಇಂದು ಅಭಿಪ್ರಾಯ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು, ವಿದೇಶಗಳಲ್ಲಿರುವ ಆಸ್ತಿಗಳ ಸಂಪೂರ್ಣ ವಿವರಗಳನ್ನು ನಾಲ್ಕು ವಾರಗಳಲ್ಲಿ ತನಗೆ ಸಲ್ಲಿಸುವಂತೆ ಅವರಿಗೆ ನಿರ್ದೇಶ ನೀಡಿದೆ.
ಈ ವರ್ಷದ ಫೆಬ್ರವರಿಯಲ್ಲಿ ಬ್ರಿಟಿಷ್ ಕಂಪನಿ ಡಿಯಾಜಿಯೊದಿಂದ ತಾನು ಸ್ವೀಕರಿಸಿದ್ದ 40ಮಿಲಿಯನ್ ಡಾಲರ್ ಮೊತ್ತದ ವಿವರಗಳನ್ನು ನೀಡದಿದ್ದಕ್ಕಾಗಿಯೂ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಆರ್.ಎಫ್.ನಾರಿಮನ್ ಅವರ ಪೀಠವು ಮಲ್ಯರನ್ನು ತರಾಟೆಗೆತ್ತಿಕೊಂಡಿತು.
ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ನ.24ಕ್ಕೆ ನಿಗದಿಗೊಳಿಸಿತು.
ಮಲ್ಯ ಅವರು ಡಿಯಾಜಿಯೊದಿಂದ ಸ್ವೀಕರಿಸಿದ್ದ 40 ಮಿ.ಡಾ.ಸೇರಿದಂತೆ ತನ್ನ ಆಸ್ತಿಗಳನ್ನು ಉದ್ದೇಶಪೂರ್ವಕವಾಗಿ ಸಂಪೂರ್ಣವಾಗಿ ಘೋಷಿಸಿಲ್ಲ ಎಂದು ಎಸ್‌ಬಿಐ ಸೇರಿದಂತೆ ಬ್ಯಾಂಕುಗಳ ಕೂಟ ಆ.29ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.
ತಾನು 1988ರಿಂದ ಅನಿವಾಸಿ ಭಾರತೀಯನಾಗಿರುವುದರಿಂದ ವಿದೇಶಗಳಲ್ಲಿರುವ ತನ್ನ ಚರ ಮತ್ತು ಸ್ಥಿರ ಆಸ್ತಿಗಳ ಕುರಿತು ಮಾಹಿತಿಗಳನ್ನು ಕೇಳಲು ಬ್ಯಾಂಕುಗಳಿಗೆ ಹಕ್ಕಿಲ್ಲ ಎಂದು ಮಲ್ಯ ಈ ಹಿಂದೆ ಪ್ರತಿಪಾದಿಸಿದ್ದರು.