×
Ad

ಆಪ್, ಆರೆಸ್ಸೆಸ್, ಎಡರಂಗ, ಜೆಡಿಯುಗಳಿಂದ ಒಂದೇ ವೇದಿಕೆಯಲ್ಲಿ ಪ್ರತಿಭಟನೆ !

Update: 2016-10-26 11:19 IST
  • ಇದು ಕೇಂದ್ರ ಸರಕಾರದ ವಿರುದ್ಧ !
  •  ಕಾರಣವೇನು ಗೊತ್ತೇ ?

ಹೊಸದಿಲ್ಲಿ, ಅ.26: ಬದ್ಧವೈರಿಗಳೆಂದೇ ಗುರುತಿಸಲ್ಪಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಹಾಗೂ ಸಿಪಿಐ ಅಪರೂಪದ ವಿದ್ಯಮಾನದಲ್ಲಿ ಒಂದೇ ವೇದಿಕೆಯಲ್ಲಿ ಪ್ರತಿಭಟನೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರೆಲ್ಲಾ ರೈತರೊಂದಿಗೆ ಸೇರಿ ಕೇಂದ್ರ ಸರಕಾರ ಮಾರುಕಟ್ಟೆಗೆ ತರಲುದ್ದೇಶಿಸಿರುವ ಜಿಎಂ ಸಾಸಿವೆ ವಿರುದ್ಧ ಸೆಟೆದು ನಿಂತಿದ್ದಾರೆ.
ಜಿಎಂ ಸಾಸಿವೆಯನ್ನು ತಿರಸ್ಕರಿಸಿ ಬಿಹಾರ ಮುಖ್ಯಮಂತ್ರಿ ಹಾಗೂ ಜನತಾ ದಳ (ಯು)- ಅಧ್ಯಕ್ಷ ನಿತೀಶ್ ಕುಮಾರ್ ಮಾಡಿರುವ ಭಾಷಣದ ವೀಡಿಯೋವನ್ನು ಈ ಸಂದರ್ಭ ಪ್ರದರ್ಶಿಸಲಾಯಿತು. ಎಎಪಿ ಸಚಿವ ಕಪಿಲ್ ಮಿಶ್ರಾ ಹಾಗೂ ಕಾಂಗ್ರೆಸ್ ಸಂಸದ ಗೌರವ್ ಗೊಗೋಯಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಪರಿಸರ ಸಚಿವಾಲಯವು ಜಿಎಂ ಸಾಸಿವೆಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬೆಳೆಸಲು ಅನುಮತಿ ನೀಡುವ ಬಗ್ಗೆ ಯೋಚಿಸುತ್ತಿದೆ. ಈ ಸಾಸಿವೆಯನ್ನು ದಿಲ್ಲಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದೆ.
ಪಂಜಾಬ್, ರಾಜಸ್ಥಾನ, ಗುಜರಾತ್, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮುಂತಾದ 20  ರಾಜ್ಯಗಳ ನೂರಾರು ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಖಿಲ ಭಾರತೀಯ ಕಿಸಾನ್ ಸಭಾ, ಭಾರತೀಯ ಕಿಸಾನ್ ಯೂನಿಯನ್, ನ್ಯೂ ಟ್ರೇಡ್ ಯೂನಿಯನ್ ಇನೀಶ್ಯೇಟಿವ್, ಸ್ವದೇಶಿ ಜಾಗರಣ್ ಮಂಚ್ ಮುಂತಾದ 130 ಸಂಘಟನೆಗಳೂ ಈ ಪ್ರತಿಭಟನೆಗೆ ಬೆಂಬಲ ನೀಡಿದ್ದವು.
ಜೈವಿಕ ತಳಿ ಮಾರ್ಪಾಟು ಮೂಲಕ ಬೆಳೆಸಲಾಗುವ ಸಾಸಿವೆ ರೈತರಿಗೆ ಹಾನಿಕರವೆಂದು ಹೇಳಿದ ಪ್ರತಿಭಟನಾಕಾರರು, ಈ ಸಾಸಿವೆಯನ್ನು ಬೆಳೆಸುವ ವಿಚಾರದಲ್ಲಿ ಸರಕಾರ ಸಾಕಷ್ಟು ಪಾರದರ್ಶಕ ನೀತಿ ಅನುಸರಿಸಿಲ್ಲವೆಂದು ದೂರಿದರು.
ಈ ಪ್ರತಿಭಟನೆಗೆ ಸರ್ಸೊ ಸತ್ಯಾಗ್ರಹ್ ಎಂದು ಹೆಸರಿಸಲಾಗಿದ್ದು, ಜಿಎಂ ಸಾಸಿವೆಯನ್ನು ತಿರಸ್ಕರಿಸುವಂತೆ ಕೋರಿ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ರೈತರಿಗೆ ಉತ್ತಮ ಮಾರಾಟ ಬೆಲೆಯೊದಗಿಸುವ ಮೂಲಕ ಅವರ ಸಮಸ್ಯೆಯನ್ನು ಪರಿಹರಿಸಬಹುದೇ ವಿನಹ ಇಂತಹ ಜೈವಿಕ ತಳಿ ಮಾರ್ಪಾಟು ಮೂಲಕ ಬೆಳೆಸಲಾಗುವ ಸಾಸಿವೆಯಿಂದಲ್ಲ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್‌ ನಾಯಕ ಚೌಧುರಿ ರಾಕೇಶ್ ತಿಕಾಯತ್ ಹೇಳಿದರು.
ಪರಿಸರ ಸಚಿವಾಲಯದ ಜೆನೆಟಿಕ್ ಇಂಜಿನಿಯರಿಂಗ್ ಎಪ್ರೈಸಲ್ ಕಮಿಟಿ ತನ್ನ ಸೆಪ್ಟೆಂಬರ್ 5ರ ವರದಿಯಲ್ಲಿ ಜಿಎಂ ಸಾಸಿವೆ ಮನುಷ್ಯರಿಗೆ ಸೇವಿಸಲು ಸುರಕ್ಷಿತ ಎಂದಿತ್ತು.
ಆದರೂ ಈ ವಿಚಾರದಲ್ಲಿ ಪರಿಸರ ಸಚಿವ ಅನಿಲ್ ಎಂ. ದವೆ ಅಂತಿಮ ನಿರ್ಧಾರ ಕೈಗೊಳ್ಳುವವರಾಗಿದ್ದು, ಯುಪಿಎ ಆಡಳಿತಾವಧಿಯಲ್ಲಿ ಅಂದಿನ ಸಚಿವ ಜೈರಾಂ ರಮೇಶ್ ಬಿಟಿ ಬದನೆಯನ್ನು ತಿರಸ್ಕರಿಸಿದಂತೆ ಅನಿಲ್ ಕೂಡ ಜಿಎಂ ಸಾಸಿವೆಯನ್ನು ತಿರಸ್ಕರಿಸುವ ಅಧಿಕಾರ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News