×
Ad

ದೀಪಾವಳಿಗೆ ಸ್ಪೆಷಲ್ ಗಿಫ್ಟ್ ಸ್ವೀಕರಿಸಿದ ರಹಾನೆ

Update: 2016-11-01 23:37 IST

   ಹೊಸದಿಲ್ಲಿ, ನ.1: ಭಾರತದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ದೀಪಾವಳಿಯ ಹಬ್ಬದ ವಿಶೇಷ ಉಡುಗೊರೆಯೊಂದನ್ನು ಸ್ವೀಕರಿಸಿದರು. ಕ್ರಿಕೆಟಿಗ ರಹಾನೆಗೆ ಜರ್ಮನಿ ಆಟಗಾರ, ಬೆಯರ್ನ್ ಮ್ಯೂನಿಕ್‌ನ ಮಿಡ್ ಫೀಲ್ಡರ್ ಅರ್ಜೆನ್ ರೊಬೆನ್ ಕಳುಹಿಸಿಕೊಟ್ಟಿದ್ದ ಜರ್ಸಿ ಸ್ವೀಕರಿಸಿದ್ದಾರೆ. 27 ನಂಬರ್‌ನ ಮ್ಯೂನಿಕ್‌ನ ಜರ್ಸಿಯಲ್ಲಿ ರೊಬೆನ್ ಹೆಸರನ್ನು ಮುದ್ರಿಸಲಾಗಿತ್ತು.

ರಹಾನೆ ಇದಕ್ಕೆ ಪ್ರತಿಯಾಗಿ ತನ್ನ ಜರ್ಸಿಯನ್ನು ರೊಬೆನ್‌ಗೆ ಕಳುಹಿಸಿಕೊಟ್ಟಿದ್ದಾರೆ. ಈ ಇಬ್ಬರು ವಿನಿಮಯ ಮಾಡಿಕೊಂಡ ಜರ್ಸಿಯ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಸಂಭ್ರಮಪಟ್ಟಿದ್ದಾರೆ.

ರಹಾನೆ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದಾರೆ. ಸರಣಿಯ ಎಲ್ಲ ಐದು ಪಂದ್ಯಗಳನ್ನು ಆಡಿರುವ ರಹಾನೆ, ರೋಹಿತ್ ಶರ್ಮರೊಂದಿಗೆ ಭಾರತದ ಇನಿಂಗ್ಸ್ ಆರಂಭಿಸಿದ್ದರು.

 ರಹಾನೆ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಲು ನೆರವಾಗಿದ್ದರು. ರೊಬೆನ್ 2009ರ ಆಗಸ್ಟ್‌ನಲ್ಲಿ ಸ್ಪೇನ್‌ನ ರಿಯಲ್ ಮ್ಯಾಡ್ರಿಡ್‌ನಿಂದ ಜರ್ಮನಿಯ ಬೆಯರ್ನ್ ಮ್ಯೂನಿಕ್ ಕ್ಲಬ್‌ಗೆ ವರ್ಗಾವಣೆಯಾಗಿದ್ದರು. ಬೇಯರ್ನ್ ಮ್ಯೂನಿಕ್ ತಂಡ ನಾಲ್ಕು ಬಾರಿ ಜರ್ಮನಿ ಬಂಡೆಸ್ಲಿಗ ಪ್ರಶಸ್ತಿಯನ್ನು ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಮ್ಯೂನಿಕ್ ಒಟ್ಟು 26 ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 20 ಬಾರಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದೆ.

ರಹಾನೆ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯತ್ತ ಗಮನ ಹರಿಸಲಿದ್ದಾರೆ.ರಾಜ್‌ಕೋರ್ಟ್‌ನಲ್ಲಿ ನ.9 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಭಾಗವಹಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News