ರಣಜಿ ಟ್ರೋಫಿ: ವೇಗದ ಶತಕ ಬಾರಿಸಿದ ರಿಷಬ್ ಪಂತ್

Update: 2016-11-08 09:38 GMT

ತಿರುವನಂತಪುರ, ನ.8: ದಿಲ್ಲಿಯ ಯುವ ಬ್ಯಾಟ್ಸ್‌ಮನ್ ರಿಷಬ್ ಪಂತ್ ರಣಜಿ ಟ್ರೋಫಿ ಇತಿಹಾಸದಲ್ಲಿ ವೇಗದ ಶತಕವನ್ನು ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.

ಇಲ್ಲಿನ ಕೆಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿಯ ನಾಲ್ಕನೆ ದಿನದಾಟದಲ್ಲಿ ದಿಲ್ಲಿಯ ಪರ ಎರಡನೆ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಪಂತ್ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿ ರಣಜಿ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದರು.

19ರ ಹರೆಯದ ಪಂತ್ ಈ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಆರು ಇನಿಂಗ್ಸ್‌ಗಳಲ್ಲಿ 700ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ 67 ಎಸೆತಗಳನ್ನು ಎದುರಿಸಿದ್ದ ಪಂತ್ 13 ಸಿಕ್ಸರ್ ಹಾಗೂ 8 ಬೌಂಡರಿ ಬಾರಿಸಿದರು.

2015ರಲ್ಲಿ ನಮನ್ ಓಜಾ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಸಾಧನೆ ಮಾಡಿದ್ದರು. ಓಜಾ 69 ಎಸೆತಗಳಲ್ಲಿ ಶತಕ ಪೂರೈಸಿದ್ದರು.

ಪಂತ್ ಜಾರ್ಖಂಡ್ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ 106 ಎಸೆತಗಳಲ್ಲಿ 117 ರನ್ ಗಳಿಸಿದ್ದರು. 82 ಎಸೆತಗಳಲ್ಲಿ ಶತಕ ಬಾರಿಸಿದ್ದ ಪಂತ್ ರಣಜಿ ಟ್ರೋಫಿಯಲ್ಲಿ 3ನೆ ವೇಗದ ಶತಕ ಬಾರಿಸಿದ್ದರು. ಪಂದ್ಯದ ಎರಡನೆ ಇನಿಂಗ್ಸ್‌ನಲ್ಲೂ ಶತಕ ಬಾರಿಸಿದ ಪಂತ್ ಜಾರ್ಖಂಡ್ ಮೇಲೆ ಸವಾರಿ ಮಾಡಿದರು.

2ನೆ ಇನಿಂಗ್ಸ್‌ನಲ್ಲಿ 67 ಎಸೆತಗಳಲ್ಲಿ 135 ರನ್ ಗಳಿಸಿದ ಪಂತ್ ಅವರು ಆಶೀಷ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು.

 ಪಂತ್ ಕೆಲವೇ ದಿನಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ಬಿ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರದ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಪಂತ್ ಈ ಐತಿಹಾಸಿಕ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ಪಂತ್ 326 ಎಸೆತಗಳಲ್ಲಿ 308 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News