10ನೆ ಆವೃತ್ತಿಯ ಐಪಿಎಲ್:ಎ.5 ರಿಂದ ಆರಂಭ

Update: 2016-11-08 18:04 GMT

 ಹೊಸದಿಲ್ಲಿ, ನ.8: ಹತ್ತನೆ ಆವೃತ್ತಿಯ ಐಪಿಎಲ್ ಟೂರ್ನಿ ಮುಂದಿನ ವರ್ಷ ಎಪ್ರಿಲ್ 5 ರಂದು ಆರಂಭವಾಗುವ ಸಾಧ್ಯತೆಯಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಫೆ.4 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

 ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿ ಮಾ.29 ರಂದು ಕೊನೆಗೊಳ್ಳಲಿದೆ. ಸರಣಿ ಕೊನೆಗೊಂಡ ಒಂದೇ ವಾರದಲ್ಲಿ ಐಪಿಎಲ್ ಆರಂಭವಾಗಲಿದೆ. ಲೋಧಾ ಸಮಿತಿಯ ಶಿಫಾರಸಿನನ್ವಯ ಐಪಿಎಲ್-ಅಂತಾರಾಷ್ಟ್ರೀಯ ಸರಣಿಯ ನಡುವೆ 15 ದಿನಗಳ ಅಂತರವಿರಬೇಕು. ‘‘ನಾವು ಸುಪ್ರೀಂಕೋರ್ಟಿನಿಂದ ನೇಮಕಗೊಂಡಿರುವ ಲೋಧಾ ಸಮಿತಿಯ ಶಿಫಾರಸುಗಳನ್ನು ಉಲ್ಲಂಘಿಸಿಲ್ಲ. ಎಪ್ರಿಲ್ 5 ರಂದು ಐಪಿಎಲ್ ಆರಂಭಿಸುವ ಪ್ರಸ್ತಾವನೆ ಇಡಲಾಗಿದೆ. ಫೆ.4 ರಂದು ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆಸೀಸ್ ವಿರುದ್ಧ ಸರಣಿಯ ಬಳಿಕ ಒಂದು ವಾರ ಅಂತರವಿರಲಿದೆ’’ ಎಂದು ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ 10 ವರ್ಷಗಳ ಒಪ್ಪಂದದ ಪ್ರಕಾರ 10ನೆ ಆವೃತ್ತಿಯ ಐಪಿಎಲ್ ಅಂತಿಮ ಆವೃತ್ತಿಯಾಗಿದೆ. ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ನಾಗ್ಪುರದಲ್ಲಿ 10ನೆ ಆವೃತ್ತಿಯ ಟೂರ್ನಮೆಂಟನ್ನು ಆಯೋಜಿಸಲು ಅನುಮತಿ ನೀಡಲಾಗಿದೆ. 2015ರಲ್ಲಿ ಮಹಾರಾಷ್ಟ್ರದಲ್ಲಿ ನಿಗದಿಯಾಗಿದ್ದ ಐಪಿಎಲ್ ಪಂದ್ಯಗಳು ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News