ಭಾರತ ವಿರುದ್ಧ ಚೊಚ್ಚಲ ಪಂದ್ಯ ಆಡಲು ಹಮೀದ್ ಸಜ್ಜು
Update: 2016-11-08 23:11 IST
ರಾಜ್‌ಕೋಟ್, ನ.8: ಹತ್ತೊಂಭತ್ತರ ಹರೆಯದ ಹಸೀಬ್ ಹಮೀದ್ ಇಂಗ್ಲೆಂಡ್ ಟೆಸ್ಟ್ ಇತಿಹಾಸದಲ್ಲಿ ಟೆಸ್ಟ್ ಇನಿಂಗ್ಸ್ ಆರಂಭಿಸಲಿರುವ ಯುವ ಆಟಗಾರ ಎನಿಸಿಕೊಳ್ಳಲು ಸಜ್ಜಾಗಿದ್ದಾರೆ. ಭಾರತ ವಿರುದ್ಧ ಬುಧವಾರ ಆರಂಭವಾಗಲಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಆಡುವ 11ರ ಬಳಗದಲ್ಲಿ ಹಮೀದ್ ಸ್ಥಾನ ಪಡೆದಿದ್ದು, ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ನಾಯಕ ಅಲೆಸ್ಟೈರ್ ಕುಕ್ ಸುಳಿವು ನೀಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಕಳೆದ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ಬೆನ್ ಡಕೆಟ್ ಕೆಳ ಕ್ರಮಾಂಕದಲ್ಲಿ ಆಡಲಿದ್ದಾರೆ. ಫಾರ್ಮ್‌ನಲ್ಲಿಲ್ಲದ ಗ್ಯಾರಿ ಬ್ಯಾಲನ್ಸ್‌ರನ್ನು ತಂಡದಿಂದ ಕೈಬಿಡಲಾಗಿದೆ. ಬ್ಯಾಲನ್ಸ್ ಕಳೆದ 6 ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿಲ್ಲ. ಈ ಹಿನ್ನೆಲೆಯಲ್ಲಿ ಹಮೀದ್‌ಗೆ ಅವಕಾಶ ಲಭಿಸಿದೆ. ಯುವ ಆಟಗಾರ ಹಮೀದ್ ನೆಟ್ ಪ್ರಾಕ್ಟೀಸ್‌ನಲ್ಲಿ ಉತ್ತಮವಾಗಿ ಆಡುವ ಭರವಸೆ ಮೂಡಿಸಿದ್ದಾರೆ ಎಂದು ಕುಕ್ ಹೇಳಿದರು.