×
Ad

ಹಣ ಬಿಡುಗಡೆಗೆ ಬಿಸಿಸಿಐಗೆ ಸುಪ್ರೀಂ ಅನುಮತಿ

Update: 2016-11-08 23:16 IST

ಹೊಸದಿಲ್ಲಿ, ನ.8: ಭಾರತ ಹಾಗೂ ಇಂಗ್ಲೆಂಡ್‌ನ ನಡುವೆ ಬುಧವಾರ ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಪ್ರಥಮ ಟೆಸ್ಟ್‌ಗೆ ಎದುರಾಗಿದ್ದ ಆತಂಕವೊಂದು ನಿವಾರಣೆಯಾಗಿದೆ. ಮೊದಲ ಟೆಸ್ಟ್‌ನ ಆತಿಥ್ಯವಹಿಸಿಕೊಂಡಿರುವ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಗೆ 58.66 ಲಕ್ಷ ರೂ. ಬಿಡುಗಡೆ ಮಾಡಲು ಬಿಸಿಸಿಐಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

‘‘ಪ್ರಥಮ ಟೆಸ್ಟ್ ನಡೆಯಬೇಕಾದರೆ ಹಣ ಬಿಡುಗಡೆ ಮಾಡಬೇಕಾದ ಅಗತ್ಯವಿದೆ. ಹಣ ಬಿಡುಗಡೆ ಮಾಡದೇ ಇದ್ದರೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ರದ್ದು ಪಡಿಸಬೇಕಾಗುತ್ತದೆ’’ ಎಂದು ಬಿಸಿಸಿಐನ ಹಿರಿಯ ವಕೀಲ ಕಪಿಲ್ ಸಿಬಾಲ್ ಉಚ್ಚ ನ್ಯಾಯಾಲಯಕ್ಕೆ ಇಂದು ಬೆಳಗ್ಗೆ ತಿಳಿಸಿದರು.

 ತನ್ನಿಂದ ನೇಮಿಸಲ್ಪಟ್ಟಿರುವ ಲೋಧಾ ಸಮಿತಿ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರುವುದಾಗಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ದೇಶದ ಇತರ 13 ರಾಜ್ಯ ಸಂಸ್ಥೆಗಳು ಭರವಸೆ ನೀಡುವ ತನಕ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಸಹಿತ ಯಾವುದೇ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವಂತಿಲ್ಲ ಎಂದು ಕಳೆದ ತಿಂಗಳು ನೀಡಿದ್ದ ಮಧ್ಯಂತರ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಬಿಸಿಸಿಐಗೆ ತಾಕೀತು ಮಾಡಿತ್ತು.

ಬಿಸಿಸಿಐ ಅ.21 ರಂದು ನ್ಯಾಯಾಲಯ ನೀಡಿರುವ ಆದೇಶವನ್ನು ಉಲ್ಲಂಘಿಸುತ್ತಿದೆ. ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಸಮಿತಿ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರುವ ತನಕ ಹಣ ಬಿಡುಗಡೆ ಮಾಡಲು ಅನುಮತಿ ನೀಡಬಾರದು ಎಂದು ಲೋಧಾ ಸಮಿತಿಯ ವಕೀಲರಾದ ಗೋಪಾಲ್ ಸುಬ್ರಹ್ಮಣ್ಯ ವಾದ ಮಂಡಿಸಿದರು.

ನಾವು(ಬಿಸಿಸಿಐ) ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಿದಂತಾಗುತ್ತದೆ ಎಂದಾದರೆ ಲೋಧಾ ಸಮಿತಿಯೇ ಹಣ ಬಿಡುಗಡೆ ಮಾಡಬೇಕು ಎಂದು ಸಿಬಲ್ ನ್ಯಾಯಾಲಯವನ್ನು ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News