ಗುಲ್ಝಾರ್‌ಗೆ ಟಾಟಾ ಸಾಹಿತ್ಯೋತ್ಸವ ಪ್ರಶಸ್ತಿ
ಹೊಸದಿಲ್ಲಿ, ನ.12: ಹಿರಿಯ ಗೀತ ರಚನೆಕಾರ, ಲೇಖಕ ಹಾಗೂ ಚಿತ್ರ ನಿರ್ಮಾಪಕ ಗುಲ್ಝಾರ್, ಈ ವರ್ಷದ ‘ಟಾಟಾ ಲಿಟರೇಚರ್ ಲೈವ್! ಪೊಯೆಟ್ ಲಾರೇಟ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮುಂಬೈ ಲಿಟ್‌ಫೆಸ್ಟ್‌ನ 7ನೆ ಆವೃತ್ತಿಯ ವೇಳೆ, ನ.17ರಂದು ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ.
ಒಂದು ಕ್ಷಣ, ಇದರಲ್ಲೇನೋ ಪ್ರಮಾದವಾಗಿದೆಯೆಂದು ತಾನು ಭಾವಿಸಿದೆ. ಕತ್ತಲೆಯ ಕೋಣೆಯಲ್ಲಿ ನಡೆದಾಗ ಅಲ್ಲಿನ ಬೆಳಕಿಗೆ ಕಣ್ಣುಗಳು ಹೊಂದಾಣಿಕೆಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಅದರಂತೇ ತನಗಾಯಿತು. ಈ ಪ್ರಶಸ್ತಿ ಪಡೆಯುವುದು ಗೌರವದ ವಿಷಯವಾಗಿದೆ. ಇದು ಕೆಲಸದಲ್ಲಿ ಇನ್ನಷ್ಟು ವಿಶ್ವಾಸ ಹಾಗೂ ಭರವಸೆಯನ್ನು ನೀಡುತ್ತದೆಂದು 82ರ ಹರೆಯದ ಗುಲ್ಝಾರ್ ಪ್ರತಿಕ್ರಿಯಿಸಿದ್ದಾರೆ. ಅವರು ಸಾಹಿತ್ಯೋತ್ಸವದಲ್ಲಿ ತನ್ನ ಕೆಲವು ಬರಹಗಳನ್ನು ಓದಲಿದ್ದಾರೆ.
ಗುಲ್ಝಾರ್ ‘ಕೋಶಿಷ್’ ಚಿತ್ರಕ್ಕಾಗಿ 1972ರಲ್ಲಿ ಮೊದಲ ರಾಷ್ಟ್ರೀಯ ಚಿತ್ರ ಪ್ರಶಸ್ತಿ ಪಡೆದಿದ್ದರು. ಆ ಬಳಿಕ, ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ ‘ಜೈಹೋ’ ಹಾಡಿಗಾಗಿ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸುತ್ತಲೇ ಸಾಗಿದ್ದರು.