×
Ad

ಭೂಕಂಪದ ಹೊರತಾಗಿಯೂ ಕ್ರೈಸ್ಟ್‌ಚರ್ಚ್ ಟೆಸ್ಟ್ ಅಬಾಧಿತ

Update: 2016-11-14 23:26 IST

 ಕೈಸ್ಟ್‌ಚರ್ಚ್, ನ.14: ಸೋಮವಾರ ಮಧ್ಯರಾತ್ರಿ ಇಲ್ಲಿಂದ 95 ಕಿ.ಮೀ. ದೂರದ ಸಮುದ್ರ ಪ್ರದೇಶದಲ್ಲಿ 7.5 ರಿಕ್ಟರ್ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದರೂ ನ.17 ರಂದು ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ ನಡುವೆ ಮೊದಲ ಟೆಸ್ಟ್ ಪಂದ್ಯ ನಿಗದಿಯಂತೆಯೇ ನಡೆಯಲಿದೆ.

ಭೂಕಂಪ ಸಂಭವಿಸಿದಾಗ ನೆಲ್ಸನ್ ಪಟ್ಟಣದಲ್ಲಿದ್ದ ಪಾಕಿಸ್ತಾನದ ಪುರುಷರ ತಂಡ ಭೂಕಂಪನದ ಅನುಭವದಿಂದ ಭಯಭೀತರಾಗಿದ್ದಾರೆ. ಆದಾಗ್ಯೂ ಗುರುವಾರ ಆರಂಭವಾಗಲಿರುವ ಮೊದಲ ಟೆಸ್ಟ್‌ಗೆ ತಯಾರಿ ನಡೆಸುತ್ತಿದ್ದಾರೆ.

‘‘ಮೊದಲ ಟೆಸ್ಟ್‌ಗೆ ಸಿದ್ಧತೆ ಚೆನ್ನಾಗಿಯೇ ನಡೆಯುತ್ತಿದೆ. ಆದರೆ, ನಾವು ಪರಿಸ್ಥಿತಿಯ ಬಗ್ಗೆ ನಿಗಾವಹಿಸಲಿದ್ದೇವೆ. ನಾವು ಸಂಬಂಧಪಟ್ಟ ಪ್ರಾಧಿಕಾರಗಳೊಂದಿಗೆ ಸಂಪರ್ಕದಲ್ಲಿರುತ್ತೇವೆ’’ ಎಂದು ನ್ಯೂಝಿಲೆಂಡ್ ಕ್ರಿಕೆಟ್ ವಕ್ತಾರರು ತಿಳಿಸಿದ್ದಾರೆ.

ಉಭಯ ತಂಡಗಳು ಸೋಮವಾರ ಕ್ರೈಸ್ಟ್ಛ್‌ಚರ್ಚ್‌ಗೆ ಆಗಮಿಸಲಿವೆ. ಮಂಗಳವಾರ ಮ್ಯಾಚ್‌ಪ್ರಾಕ್ಟೀಸ್‌ನಲ್ಲಿ ತೊಡಗುತ್ತವೆ.

ಕ್ರೈಸ್ಟ್‌ಚರ್ಚ್ ಪ್ರದೇಶವೂ ಭೂಕಂಪಪೀಡಿತವಾಗಿದ್ದು, ಸೋಮವಾರ ರಾತ್ರಿ 1.30ಕ್ಕೆ 6.3 ರಿಕ್ಟರ್ ತೀವ್ರತೆಯ ಭೂಕಂಪನವಾಗಿದೆ. ಇದು ಮುಂದಿನ ವಾರವೂ ಮುಂದುವರಿಯುವ ಸಾಧ್ಯತೆಯಿದೆ.

 ಟೀಮ್ ಹೊಟೇಲ್ ಹಾಗೂ ಮೈದಾನದಲ್ಲಿ ಪಾಕ್ ತಂಡದ ಸುರಕ್ಷತೆಯ ಬಗ್ಗೆ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ನಮಗೆ ಭರವಸೆ ನೀಡಿದೆ. ಕ್ರಿಕೆಟಿಗರು ನೆಲ್ಸನ್ ಪಟ್ಟಣದಲ್ಲಿ ನಿದ್ದೆಯಿಲ್ಲದ ರಾತ್ರಿ ಕಳೆದಿದ್ದಾರೆ. ಭೂಕಂಪ ಸಂಭವಿಸಿದಾಗ ಎಲ್ಲರೂ ಹೊಟೇಲ್‌ನ್ನು ತೆರವು ಗೊಳಿಸಿದ್ದರು. ಹೆಚ್ಚಿನವರು ರಾತ್ರಿ ರೂಮ್‌ಗೆ ವಾಪಸಾಗಲಿಲ್ಲ. ರಿಸೆಪ್ಶನ್ ಏರಿಯಾದಲ್ಲಿ ಕಾಲ ಕಳೆದಿದ್ದರು ಎಂದು ಪಾಕಿಸ್ತಾನ ತಂಡದ ಮ್ಯಾನೇಜರ್ ವಾಸಿಂ ಬಾರಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಹೆಚ್ಚು ಭೂಕಂಪವಾಗದ ಕಾರಣ ನಮಗೆ ಇದು ಹೊಸ ಅನುಭವ. ನಾವು ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದಾಗ ಹೊಟೇಲ್‌ನ ಬಾಗಿಲು-ಕಿಟಕಿಗಳು ಅಲುಗಾಡಲಾರಂಭಿಸಿದವು. ತವರಿನಲ್ಲಿ ಮನೆಯವರು ಆತಂಕದಲ್ಲಿದ್ದಾರೆ ಎಂದು ವಾಸಿಂ ಹೇಳಿದರು.

ಭೂಕಂಪ ಸಂಭವಿಸಿದಾಗ ಪಾಕ್‌ನ ಮಹಿಳಾ ಕ್ರಿಕೆಟ್ ತಂಡ ಹೊಟೇಲ್‌ನ ಮೇಲಂತಸ್ತಿನಲ್ಲಿತ್ತು. ಎಲ್ಲರೂ ಭಯಭೀತರಾಗಿದ್ದರೂ, ಸುರಕ್ಷಿತರಾಗಿದ್ದಾರೆ ಎಂದು ಮ್ಯಾನೇಜರ್ ಬಸಿತ್ ಅಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News