×
Ad

ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕ ಬಿಗಿ ಹಿಡಿತ

Update: 2016-11-14 23:36 IST

ಹೊಬರ್ಟ್, ನ.14: ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಕ್ವಿಂಟನ್ ಡಿಕಾಕ್(104) ಶತಕದ ಬೆಂಬಲದಿಂದ ದಕ್ಷಿಣ ಆಫ್ರಿಕ ತಂಡ 241 ರನ್ ಮುನ್ನಡೆ ಸಾಧಿಸಿತು.

3ನೆ ದಿನದಾಟದಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಿರುವ ಆಸ್ಟ್ರೇಲಿಯ ಇನ್ನೂ 120 ರನ್ ಹಿನ್ನಡೆಯಲ್ಲಿದೆ.   9ನೆ ಅರ್ಧಶತಕ ಬಾರಿಸಿರುವ ಉಸ್ಮಾನ್ ಖ್ವಾಜಾ(ಅಜೇಯ 56) ಹಾಗೂ ನಾಯಕ ಸ್ಟೀವನ್ ಸ್ಮಿತ್(18) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆರಂಭಿಕ ಆಟಗಾರ ಡೇವಿಡ್ ವಾರ್ನರ್ ದಿನದಾಟದಂತ್ಯಕ್ಕೆ ಕೈಲ್ ಅಬಾಟ್ ಎಸೆತವನ್ನು ಕೆಣಕಲು ಹೋಗಿ 45 ರನ್‌ಗೆ ಔಟಾದರು. ಕೇವಲ 4 ಎಸೆತಗಳನ್ನು ಎದುರಿಸಿದ ಬರ್ನ್ಸ್ ವೇಗಿ ಅಬಾಟ್‌ಗೆ ಎರಡನೆ ಬಲಿಯಾದರು.

ಬರ್ನ್ಸ್ ಮೊದಲ ಓವರ್‌ನಲ್ಲಿ ಔಟಾದಾಗ 2ನೆ ವಿಕೆಟ್‌ಗೆ 79 ರನ್ ಜೊತೆಯಾಟ ನಡೆಸಿದ ವಾರ್ನರ್ ಹಾಗೂ ಖ್ವಾಜಾ ತಂಡವನ್ನು ಆಧರಿಸಿದರು.

ಸೊಗಸಾದ ಹೊಡೆತ ಬಾರಿಸುತ್ತಿರುವ ಖ್ವಾಜಾಗೆ ಮೊದಲ ಇನಿಂಗ್ಸ್‌ನಲ್ಲಿ ಅಗ್ರ ಸ್ಕೋರ್(ಅಜೇಯ 45) ಗಳಿಸಿದ್ದ ನಾಯಕ ಸ್ಮಿತ್ ಸಮರ್ಥ್ ಸಾಥ್ ನೀಡುತ್ತಿದ್ದಾರೆ.

ದಕ್ಷಿಣ ಆಫ್ರಿಕ 326, ಡಿಕಾಕ್ ಶತಕ, ಹೇಝಲ್‌ವುಡ್ ಆರು ವಿಕೆಟ್:

 ಇದಕ್ಕೆ ಮೊದಲು ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕ ತಂಡ 326 ರನ್‌ಗೆ ಆಲೌಟಾಗಿ 241 ರನ್ ಮುನ್ನಡೆ ಸಾಧಿಸಿತು. ಕ್ವಿಂಟನ್ ಡಿಕಾಕ್ ಶತಕ ಬಾರಿಸಿ, ಮಿಂಚಿದರು. ಆಸೀಸ್‌ನ ವೇಗಿ ಜೋಶ್ ಹೇಝಲ್‌ವುಡ್ 89 ರನ್‌ಗೆ 6 ವಿಕೆಟ್ ಕಬಳಿಸಿದರು.

28 ಎಸೆತಗಳಲ್ಲಿ 32 ರನ್ ಗಳಸಿದ ವೆರ್ನಾನ್ ಫಿಲ್ಯಾಂಡರ್ ಔಟಾಗುವುದರೊಂದಿಗೆ ಆಫ್ರಿಕದ ಇನಿಂಗ್ಸ್‌ಗೆ ತೆರೆ ಬಿತ್ತು.

 ಎರಡನೆ ದಿನವಾದ ರವಿವಾರ ಒಂದು ಎಸೆತ ಆಟ ಸಾಧ್ಯವಾಗದೇ ಪಂದ್ಯ ಮಳೆಗಾಹುತಿಯಾಗಿತ್ತು. ಶತಕದ ಜೊತೆಯಾಟ ನಡೆಸಿದ ಡಿಕಾಕ್ ಹಾಗೂ ಬವುಮಾ ಆಫ್ರಿಕ ತಂಡಕ್ಕೆ ಆಸರೆಯಾದರು. ಉತ್ತಮ ಪ್ರದರ್ಶನ ಮುಂದುವರಿಸಿದ ಸ್ಫೋಟಕ ದಾಂಡಿಗ ಡಿಕಾಕ್ 143 ಎಸೆತಗಳಲ್ಲಿ 17 ಬೌಂಡರಿಗಳ ನೆರವಿನಿಂದ 104 ರನ್ ಕಲೆ ಹಾಕಿತು. ಆರನೆ ವಿಕೆಟ್‌ಗೆ ಡಿಕಾಕ್ ಹಾಗೂ ಬವುಮಾ 144 ರನ್ ಜೊತೆಯಾಟ ನಡೆಸಿದರು. ಇದು ಹೊಬರ್ಟ್ ಪಿಚ್‌ನಲ್ಲಿ 6ನೆ ವಿಕೆಟ್‌ಗೆ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.

ಸ್ಪಿನ್ನರ್ ನಥನ್ ಲಿಯೊನ್ ಎಸೆತವನ್ನು ಮಿಡ್ ಆನ್‌ನತ್ತ ತಳ್ಳಿ ಬೌಂಡರಿ ಬಾರಿಸಿದ ಡಿಕಾಕ್ ಟೆಸ್ಟ್‌ನಲ್ಲಿ ಸತತ 5ನೆ ಬಾರಿ ಅರ್ಧಶತಕ ಬಾರಿಸಿದ ಆಫ್ರಿಕದ ನಾಲ್ಕನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಡಿಕಾಕ್ ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ 84 ಹಾಗೂ 64 ರನ್ ಗಳಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.

ಸಂಕ್ಷಿಪ್ತ ಸ್ಕೋರ್

ಆಸ್ಟೇಲಿಯ ಪ್ರಥಮ ಇನಿಂಗ್ಸ್: 85

ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್: 121/2

 (ಉಸ್ಮಾನ್ ಖ್ವಾಜಾ ಅಜೇಯ 56, ವಾರ್ನರ್ 45, ಅಬಾಟ್ 2-55)

ದಕ್ಷಿಣ ಆಫ್ರಿಕ: ಮೊದಲ ಇನಿಂಗ್ಸ್ 326

 (ಕ್ವಿಂಟನ್ ಡಿಕಾಕ್ 104, ಬವುಮಾ 74, ಫಿಲ್ಯಾಂಡರ್ 32 ಹೇಝಲ್‌ವುಡ್ 6-89, ಸ್ಟಾರ್ಕ್ 3-79)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News