×
Ad

ಇದು ಬರೀ ಹೊಣೆಗೇಡಿತನವಲ್ಲ

Update: 2016-11-16 00:17 IST

ಕೇಂದ್ರದ ನರೇಂದ್ರ ಮೋದಿ ಸರಕಾರದ ಸಚಿವರಿಗೆ ನಾಲಗೆಯ ಮೇಲೆ ಹಿಡಿತವಿಲ್ಲ. ‘ಹಿರಿಯಕ್ಕನ ಚಾಳಿ ಮನೆಮಂದಿಗೆ’ ಎಂಬಂತೆ ತಮ್ಮ ನಾಯಕನ ದಾರಿಯಲ್ಲೇ ಇವರು ಸಾಗುತ್ತಿದ್ದಾರೆ. ಈ ದೇಶವನ್ನು ಉದ್ಧಾರ ಮಾಡಲು ಬಂದ ಅವತಾರ ಪುರುಷನಂತೆ ಮಾತನಾಡುವ ನರೇಂದ್ರ ಮೋದಿ ಅವರು 70 ವರ್ಷಗಳ ಕಾಲ ಈ ದೇಶವನ್ನು ಆಳಿದವರು ಲೂಟಿ ಮಾಡಿದ್ದಾರೆ. ಅದನ್ನು ತಡೆಯಲು ‘‘ತಾನು ಮನೆಮಾರು ತೊರೆದು ಬಂದಿದ್ದೇನೆ’’ ಎಂದು ಮಹಾನ್ ತ್ಯಾಗ ಜೀವಿಯಂತೆ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ 70 ವರ್ಷಗಳಲ್ಲಿ ಕಾಂಗ್ರೆಸ್ ಮಾತ್ರ ಅಧಿಕಾರದಲ್ಲಿ ಇರಲಿಲ್ಲ. ನೆಹರೂ, ಇಂದಿರಾ ಗಾಂಧಿ ಮಾತ್ರ ಪ್ರಧಾನಿಯಾಗಿರಲಿಲ್ಲ. ಬೇರೆಯವರೂ ಅಧಿಕಾರದಲ್ಲಿದ್ದರು. ಮೊರಾರ್ಜಿ ದೇಸಾಯಿ, ದೇವೇಗೌಡ, ವಿ.ಪಿ. ಸಿಂಗ್, ಗುಲ್ಝಾರಿಲಾಲ್ ನಂದಾ, ಚಂದ್ರಶೇಖರ್ ಹಾಗೂ ಬಿಜೆಪಿಯ ವಾಜಪೇಯಿ ಅವರು ಕೂಡಾ ಪ್ರಧಾನಿಯಾಗಿದ್ದರು. ನರೇಂದ್ರ ಮೋದಿ ಅವರು ಹೇಳಿದ ಪ್ರಕಾರ ವಾಜಪೇಯಿ ಸೇರಿದಂತೆ ಎಲ್ಲರೂ ಈ ದೇಶವನ್ನು ಲೂಟಿ ಮಾಡಿದಂತಾಗುತ್ತದೆ. ತಾನು ಮಾತ್ರ ಸಾಚಾ ಎಂದು ಅವರು ಹೇಳಿಕೊಂಡಿದ್ದಾರೆ.

ಮೋದಿ ಸಂಪುಟದ ಸಚಿವರಾದ ಗಿರಿರಾಜ್ ಸಿಂಗ್, ನಿರಂಜನ್ ಜ್ಯೋತಿ, ಸಾಧ್ವಿ ಪ್ರಾಚಿ ಹೀಗೆ ಅನೇಕ ಸಚಿವರು ಎಲ್ಲಿ ಬೇಕೆಂದರಲ್ಲಿ ತಮ್ಮ ನಾಲಗೆಯನ್ನು ಹರಿಯಬಿಡುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವದ ಸಭ್ಯತೆ, ಶಿಷ್ಟಾಚಾರಗಳು ಇವರಿಗಿಲ್ಲ. ಇಂತಹ ನಾಲಗೆಗೆ ಲಗಾಮು ಇಲ್ಲದ ಸಚಿವರಲ್ಲಿ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಕೂಡಾ ಒಬ್ಬರು. ಗೋವಾ ಮುಖ್ಯಮಂತ್ರಿಯಾಗಿದ್ದಾಗ ಒಂದಿಷ್ಟು ಹೆಸರು ಮಾಡಿಕೊಂಡಿದ್ದ ಪಾರಿಕ್ಕರ್ ಅವರು ಕೇಂದ್ರದ ರಕ್ಷಣಾ ಸಚಿವನಾಗುತ್ತಿದ್ದಂತೆಯೇ ತನ್ನ ಯೋಗ್ಯತೆ ಏನೆಂಬುದನ್ನು ತೋರಿಸಿಕೊಡುತ್ತಿದ್ದಾರೆ. ತನ್ನ ಸ್ಥಾನದ ಹೊಣೆಗಾರಿಕೆಯನ್ನು ಮರೆತು ಮಾತನಾಡುತ್ತಾರೆ. ತಾನು ಆಡುವ ಮಾತಿನ ಪರಿಣಾಮದ ಬಗ್ಗೆ ಅವರಿಗೆ ಪ್ರಜ್ಞೆ ಇಲ್ಲ. ಇತ್ತೀಚೆಗೆ ಅವರು ಆಡಿದ ಮಾತೊಂದು ವಿವಾದದ ಅಲೆಯನ್ನು ಎಬ್ಬಿಸಿದೆ. ಅಣ್ವಸ್ತ್ರ ಎಂಬುದು ಜಗತ್ತಿನ ನಾಶಕ್ಕೆ ಕಾರಣ ಎಂಬ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಜಗತ್ತು ಈ ವಾಸ್ತವವನ್ನು ಒಪ್ಪಿಕೊಂಡಿದೆ. ಅಂತಲೇ ಭಾರತ ಕೂಡಾ ಅಣ್ವಸ್ತ್ರವನ್ನು ಮೊದಲು ಬಳಸುವುದಿಲ್ಲ ಎಂಬ ನೀತಿಗೆ ಬದ್ಧತೆಯನ್ನು ಘೋಷಿಸಿಕೊಂಡ ದೇಶಗಳ ಸಾಲಿನಲ್ಲಿ ಸೇರಿದೆ. ರಕ್ಷಣಾ ಸಚಿವರಾದ ಮನೋಹರ್ ಪಾರಿಕ್ಕರ್ ಅವರಿಗೆ ಅಣ್ವಸ್ತ್ರದ ಬಗ್ಗೆ ಭಾರತದ ನಿಲುವಿನ ಕುರಿತು ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ. ಇತ್ತೀಚೆಗೆ ಅವರು ಸಭೆಯೊಂದರಲ್ಲಿ ಮಾತನಾಡುತ್ತ ‘‘ಭಾರತ ಅಣ್ವಸ್ತ್ರವನ್ನು ಮೊದಲು ಬಳಕೆ ಮಾಡುವುದಿಲ್ಲ ಎಂಬ ನೀತಿಗೆ ನಾವೇಕೆ ಬದ್ಧರಾಗಿರಬೇಕು?’’ ಎಂದು ಪ್ರಶ್ನಿಸಿದರು. ರಕ್ಷಣಾ ಮಂತ್ರಿಯಂತಹ ಜವಾಬ್ದಾರಿಯ ಸ್ಥಾನದಲ್ಲಿರುವ ವ್ಯಕ್ತಿ ಇಂತಹ ಬೇಜವಾಬ್ದಾರಿಯ ಮಾತುಗಳನ್ನು ಆಡಿದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಆದರೆ, ಈ ದೇಶದ ಸಂವಿಧಾನದ ಮೇಲೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಿಲ್ಲದ ಪರಿವಾರದಿಂದ ಬಂದ ಪಾರಿಕ್ಕರ್ ಮಾತು ಸಹಜವಾಗಿ ಅವರ ಮನದ ಇಂಗಿತವನ್ನು ತೋರಿಸಿತು. ಸಚಿವರ ಈ ಮಾತು ವಿವಾದದ ಅಲೆಯನ್ನೇ ಎಬ್ಬಿಸಿದಾಗ ರಕ್ಷಣಾ ಇಲಾಖೆಯ ವಕ್ತಾರರು, ಅದು ಸಚಿವರ ವೈಯಕ್ತಿಕ ಅಭಿಪ್ರಾಯ ಸರಕಾರದ ಅಭಿಪ್ರಾಯವಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಆದರೆ, ರಕ್ಷಣಾ ಇಲಾಖೆಯಂತಹ ಮಹತ್ವದ ಹೊಣೆಗಾರಿಕೆಯನ್ನು ಹೊಂದಿರುವ ವ್ಯಕ್ತಿ ಹೀಗೆ ಕಂಡಕಂಡಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ದೇಶದ ರಕ್ಷಣೆಯಂತಹ ಮಹತ್ತರ ಹೊಣೆಗಾರಿಕೆಯನ್ನು ಹೊತ್ತಿರುವ ವ್ಯಕ್ತಿ ಸರಕಾರದ ಅಭಿಪ್ರಾಯವೇ ಬೇರೆ ತನ್ನ ಅಭಿಪ್ರಾಯವೇ ಬೇರೆ ಎಂದು ಹೇಳುವುದೇ ಅಪಾಯಕಾರಿಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಜಪಾನ್‌ನಲ್ಲಿ ಆ ದೇಶದ ಪ್ರಧಾನಿ ಜೊತೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿರುವ ಈ ಸಂದರ್ಭದಲ್ಲಿ ಪಾರಿಕ್ಕರ್ ಅವರು ಈ ರೀತಿ ಮಾತನಾಡಿರುವುದು ಜಗತ್ತಿನ ಎದುರು ಸರಕಾರಕ್ಕೆ ಮುಜುಗರವನ್ನು ತಂದಿದೆ. 1970ರಲ್ಲಿ ಮಾಡಿಕೊಳ್ಳಲಾದ ಅಣ್ವಸ್ತ್ರ ಪ್ರಸರಣ ನಿರ್ಬಂಧ ಒಪ್ಪಂದಕ್ಕೆ 180 ದೇಶಗಳು ತಮ್ಮ ಬದ್ಧತೆಯನ್ನು ತೋರಿಸಿವೆ. ಈ ಪೈಕಿ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ಅಣ್ವಸ್ತ್ರ ಹೊಂದಿರುವ ದೇಶಗಳಾಗಿವೆ. ಆಗ ಭಾರತ ಈ ಒಪ್ಪಂದಕ್ಕೆ ಸಹಿ ಹಾಕದಿದ್ದರು ಕೂಡಾ ಅನಂತರ ಅಣ್ವಸ್ತ್ರ ಬಳಕೆಯನ್ನು ಮೊದಲು ಬಳಕೆ ಮಾಡದಿರುವ ನಿಲುವಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಅಣ್ವಸ್ತ್ರವನ್ನು ಯಾರು ಬಳಸಿದರು ಕೂಡಾ ಅದು ಮನುಕುಲಕ್ಕೆ ವಿನಾಶಕಾರಿ. ಅಂತಲೇ 1998ರಲ್ಲಿ ಪರಮಾಣು ಬಳಕೆ ನಿಷೇಧಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತವು ತನ್ನ ಬದ್ಧತೆಯನ್ನು ಅಧಿಕೃತವಾಗಿ ದೃಢಪಡಿಸಿತ್ತು.

 ವಾಸ್ತವಾಂಶ ಹೀಗಿರುವಾಗ ಪಾಕಿಸ್ತಾನದಂತಹ ಅವಿವೇಕ ದೇಶ ತಾನು ಅಣ್ವಸ್ತ್ರ ಬಳಸುತ್ತೇನೆ ಎಂದು ಯುದ್ಧೋನ್ಮಾದದಿಂದ ಮಾತನಾಡಿದರೆ ಅದಕ್ಕೆ ಕೇಂದ್ರ ರಕ್ಷಣಾ ಸಚಿವರು ಇಷ್ಟೊಂದು ಉದ್ವೇಗದಿಂದ ಪ್ರತಿಕ್ರಿಯಿಸುವ ಅಗತ್ಯವಿರಲಿಲ್ಲ. ಈ ಎಚ್ಚರ ಪಾರಿಕ್ಕರ್ ಅವರಿಗೆ ಇಲ್ಲದಿರುವುದರಿಂದಲೇ ವಿವಾದಕ್ಕೆ ಆಸ್ಪದವಾಗಿದೆ. ರಕ್ಷಣಾ ಖಾತೆಯಂತಹ ಮಹತ್ವದ ಸಚಿವ ಖಾತೆಯನ್ನು ಹೊಂದಿರುವ ವ್ಯಕ್ತಿ ಇಂತಹ ಪ್ರಚೋದನಾಕಾರಿ ಮಾತುಗಳನ್ನು ಆಡುವುದು ಅವರಿಗೆ ಶೋಭೆ ತರುವುದಿಲ್ಲ. ಪ್ರಧಾನಿ ಮೋದಿ ಅವರು ಈ ವಿಷಯದಲ್ಲಿ ವೌನ ವಹಿಸಿರುವುದು ಅರ್ಥವಾಗುವುದಿಲ್ಲ. ಮನೋಹರ್ ಪಾರಿಕ್ಕರ್ ಅವರು ಬಾಯಿ ತಪ್ಪಿ ಆ ರೀತಿ ಹೇಳಿದ್ದರೋ ಅಥವಾ ಉದ್ದೇಶ ಪೂರ್ವವಾಗಿಯೇ ಹೇಳಿದ್ದರೋ ಎಂಬುದನ್ನು ತಿಳಿದುಕೊಳ್ಳಬೇಕಾದರೆ 2014ರ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಅಣ್ವಸ್ತ್ರದ ಬಗ್ಗೆ ಆ ಪಕ್ಷದ ನಿಲುವನ್ನು ವಿಮರ್ಶಿಸಬೇಕಾಗುತ್ತದೆ. ಮೊದಲು ಅಣ್ವಸ್ತ್ರ ಬಳಕೆ ಮಾಡದಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳದಿದ್ದರೂ ಅಣ್ವಸ್ತ್ರ ಪ್ರಯೋಗದ ಕಡೆ ಅದು ಒಲವನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಿಲುವನ್ನೇ ಪಾರಿಕ್ಕರ್ ಅವರು ಹೇಳಿದಂತೆ ಕಾಣುತ್ತದೆ. ಪ್ರತಿಯೊಂದು ವಿವಾದಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರಿಂದ ಹೇಳಿಕೆ ನೀಡಿಸಿ ಅದಕ್ಕೆ ಬರುವ ಪ್ರತಿಕ್ರಿಯೆಗಳನ್ನು ನೋಡಿ ನಂತರ ಪ್ರತಿಕೂಲ ಅಭಿಪ್ರಾಯ ಬಂದರೆ ಅದು ಸಚಿವರ ವೈಯಕ್ತಿಕ ಅಭಿಪ್ರಾಯ ಎಂದು ಕೇಂದ್ರದ ಬಿಜೆಪಿ ಸರಕಾರ ಜಾರಿಕೊಳ್ಳುತ್ತಾ ಬಂದಿದೆ. ಯುದ್ಧಕೋರ ರಾಷ್ಟ್ರವಾದ ಇಸ್ರೇಲ್ ಜೊತೆಗೆ ಭಾರತ ಈ ಹಿಂದೆ ಯಾವುದೇ ರಾಜತಾಂತ್ರಿಕ ಸಂಬಂಧ ಹೊಂದಿರಲಿಲ್ಲ. ಆದರೆ, ಕೇಂದ್ರದಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಭಾರತದ ಪರಂಪರಾಗತ ವಿದೇಶ ನೀತಿಯನ್ನು ಧಿಕ್ಕರಿಸಿ ಇಸ್ರೇಲ್ ಜೊತೆಗೆ ಸಂಬಂಧ ಬೆಳೆಸುವುದಕ್ಕೆ ಮುಂದಾಯಿತು. ಆಗಲೂ ವಿದೇಶಾಂಗ ಸಚಿವರ ಮೂಲಕ ಇಂತಹದ್ದೇ ಹೇಳಿಕೆಗಳನ್ನು ನೀಡಿಸಲಾಗಿತ್ತು. ಅದಕ್ಕೆ ಯಾವುದೇ ಪ್ರತಿರೋಧ ಬರಲಿಲ್ಲ ಎಂದು ಗೊತ್ತಾದಾಗ ಆ ನಿಟ್ಟಿನಲ್ಲಿ ಸರಕಾರ ಮುಂದುವರಿಯಿತು.

ಅದೇರೀತಿ ಮನೋಹರ್ ಪಾರಿಕ್ಕರ್ ಅವರು ಕೂಡಾ ಅಣ್ವಸ್ತ್ರ ಬಳಕೆಯ ಬಗ್ಗೆ ಬಾಯಿತಪ್ಪಿ ಆ ಮಾತನ್ನು ಹೇಳಿದಂತೆ ಕಾಣುವುದಿಲ್ಲ. ಆದರೆ, ತಮ್ಮ ಪರಿವಾರ ಮತ್ತು ಪಕ್ಷದ ಗುಪ್ತ ಕಾರ್ಯಸೂಚಿಯನ್ನು ದೇಶದ ಮೇಲೆ ಹೇರುವ ತಂತ್ರದ ಭಾಗವಾಗಿ ಈ ಹೇಳಿಕೆ ನೀಡಿರುವುದು ಸ್ಪಷ್ಟವಾಗುತ್ತದೆ. ಆದರೆ, ರಕ್ಷಣೆಯಂತಹ ಮಹತ್ವದ ವಿಷಯಗಳಲ್ಲಿ ಕೇಂದ್ರ ಸರಕಾರ ಇಂತಹ ಕುಚೇಷ್ಟೆಗಳನ್ನು ಮಾಡಬಾರದು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ದೇಶಕ್ಕೆ ಸ್ಪಷ್ಟೀಕರಣ ನೀಡಬೇಕು. ಇನ್ನೊಮ್ಮೆ ಹೀಗಾಗದಂತೆ ಎಚ್ಚರ ವಹಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News