ಚೀನಾ ಓಪನ್: ಸಿಂಧು, ಜಯರಾಮ್ ಕ್ವಾರ್ಟರ್‌ಫೈನಲ್‌ಗೆ

Update: 2016-11-17 17:32 GMT

ಬೀಜಿಂಗ್, ನ.17: ಚೀನಾ ಸೂಪರ್ ಸಿರೀಸ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಸಿಂಗಲ್ಸ್ ಆಟಗಾರ ಅಜಯ್ ಜಯರಾಮ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಗುರುವಾರ ಇಲ್ಲಿ ನಡೆದ 700,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಎರಡನೆ ಸುತ್ತಿನ ಪಂದ್ಯದಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ 7ನೆ ಶ್ರೇಯಾಂಕಿತೆ ಸಿಂಧು ಅಮೆರಿಕದ ಬೆಲ್ವೆನ ಝಾಂಗ್ ವಿರುದ್ಧ 18-21, 22-20, 21-17 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.

ಸಿಂಧು ಮುಂದಿನ ಸುತ್ತಿನಲ್ಲಿ ಚೀನಾದ ಹೀ ಬಿಂಗ್‌ಜಿಯಾವೊರನ್ನು ಎದುರಿಸಲಿದ್ದಾರೆ. ಬಿಂಗ್‌ಜಿಯಾವೊ ಕಳೆದ ತಿಂಗಳು ನಡೆದ ಫ್ರೆಂಚ್ ಓಪನ್‌ನ ಎರಡನೆ ಸುತ್ತಿನಲ್ಲಿ ಸಿಂಧುರನ್ನು ಸೋಲಿಸಿದ್ದರು.

56 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಜಯರಾಮ್ ಹಾಂಕಾಂಗ್‌ನ ಶಟ್ಲರ್ ವೀ ನಾನ್‌ರನ್ನು 20-22, 21-19, 21-12 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಮೂರು ಬಾರಿಯ ಡಚ್ ಓಪನ್ ಚಾಂಪಿಯನ್ ಜಯರಾಮ್ ಮುಂದಿನ ಸುತ್ತಿನಲ್ಲಿ ಹಾಲಿ ಒಲಿಂಪಿಕ್ಸ್ ಚಾಪಿಯನ್ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಚೆನ್ ಲಾಂಗ್‌ರನ್ನು ಎದುರಿಸಲಿದ್ದಾರೆ.

ಇದೇ ವೇಳೆ, ಸ್ವಿಸ್ ಓಪನ್ ವಿನ್ನರ್ ಎಚ್. ಎಸ್. ಪ್ರಣಯ್ ಅವರ ಹೋರಾಟ ಅಂತ್ಯಗೊಂಡಿತು. ಪ್ರಣಯ್ ಮತ್ತೊಂದು ಪುರುಷರ ಸಿಂಗಲ್ಸ್‌ನಲ್ಲಿ ಚೀನಾದ ಕ್ಷಿಯಾವೊ ಬಿನ್ ವಿರುದ್ಧ 17-21, 19-21 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಬಿ.ಸಾಯಿ ಪ್ರಣೀತ್ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಮಾರ್ಕ್ ಝ್ವೆಬ್ಲೆರ್ ವಿರುದ್ಧ 16-21, 9-21 ಸೆಟ್‌ಗಳ ಅಂತರದಿಂದ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News