ಚೇತೇಶ್ವರ ಪೂಜಾರ ಹ್ಯಾಟ್ರಿಕ್ ಟೆಸ್ಟ್ ಶತಕ

Update: 2016-11-17 17:35 GMT

ವಿಶಾಖಪಟ್ಟಣ, ನ.17: ಭಾರತದ ಮೂರನೆ ಕ್ರಮಾಂಕದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಜೀವನಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ. ಗುರುವಾರ ಅವರು ಇಂಗ್ಲೆಂಡ್ ವಿರುದ್ಧ ಆರಂಭವಾದ ಎರಡನೆ ಟೆಸ್ಟ್‌ನಲ್ಲೂ ಶತಕ ಬಾರಿಸಿದರು. ಇದು ಪೂಜಾರ ಬ್ಯಾಟ್‌ನಿಂದ ಸಿಡಿದ ಹ್ಯಾಟ್ರಿಕ್ ಶತಕವಾಗಿತ್ತು.

ಗುರುವಾರ ನಡೆದ ಎರಡನೆ ಟೆಸ್ಟ್‌ನ ಮೊದಲ ದಿನದಾಟದಲ್ಲಿ 184 ಎಸೆತಗಳನ್ನು ಎದುರಿಸಿದ ಪೂಜಾರ 10ನೆ ಟೆಸ್ಟ್ ಶತಕ ಪೂರೈಸಿದರು. ಇಂದೋರ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ ಅಜೇಯ 101 ರನ್ ಗಳಿಸಿದ್ದ ಪೂಜಾರ ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 124 ರನ್ ಬಾರಿಸಿದ್ದರು.

ತೆಂಡುಲ್ಕರ್, ದ್ರಾವಿಡ್ ದಾಖಲೆ ಸರಿಗಟ್ಟಿದ ಪೂಜಾರ:

10ನೆ ಶತಕ ಪೂರೈಸಿದ ಪೂಜಾರ ಕೇವಲ 67ನೆ ಇನಿಂಗ್ಸ್‌ನಲ್ಲಿ 3000 ಟೆಸ್ಟ್ ರನ್ ಪೂರೈಸಿದರು. ಅತ್ಯಂತ ವೇಗವಾಗಿ 3,000 ರನ್ ಗಳಿಸಿದ ಭಾರತದ 5ನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್ ಸಾಧನೆಯನ್ನು ಸರಿಗಟ್ಟಿದರು. ವೀರೇಂದ್ರ ಸೆಹ್ವಾಗ್ 55 ಇನಿಂಗ್ಸ್‌ನಲ್ಲಿ 3000 ರನ್ ಗಳಿಸಿದ ಅಮೋಘ ಸಾಧನೆ ಮಾಡಿದ್ದರು.

ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಪೂಜಾರ ಶತಕವನ್ನು ಪೂರೈಸಿದ್ದು ವಿಶೇಷವಾಗಿತ್ತು. ತಂಡವು ಪೂಜಾರರಿಂದ ವೇಗವಾಗಿ ರನ್ ನಿರೀಕ್ಷಿಸುತ್ತಿದೆ ಎಂದು ನಾಯಕ ವಿರಾಟ್ ಕೊಹ್ಲಿ ನ್ಯೂಝಿಲೆಂಡ್ ವಿರುದ್ಧ ಸರಣಿಯ ವೇಳೆ ಹೇಳಿಕೆ ನೀಡಿದ್ದರು. ನಾಯಕನ ಸಲಹೆಯನ್ನು ಪೂಜಾರ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.

ಪಂದ್ಯ ನಿಲ್ಲಿಸಿದ ಶ್ವಾನ!

ವಿಶಾಖಪಟ್ಟಣ, ನ.18: ಭಾರತದಲ್ಲಿ ಕ್ರಿಕೆಟ್ ಮೈದಾನದೊಳಗೆ ಶ್ವಾನಗಳು ಪ್ರವೇಶಿಸುವುದು ಅಪರೂಪದ ದೃಶ್ಯವೇನಲ್ಲ. ಆದರೆ, ವಿಝಾಗ್ ಸ್ಟೇಡಿಯಂನಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶ್ವಾನವೊಂದು ದಿಢೀರ್ ಪ್ರವೇಶಿಸಿ ಪಂದ್ಯಕ್ಕೆ ಅಡ್ಡಿಪಡಿಸಿತು.

 ಗುರುವಾರ ಟೀ ವಿರಾಮಕ್ಕೆ ಸ್ವಲ್ಪವೇ ಮೊದಲು ಶ್ವಾನವೊಂದು ಮೈದಾನಕ್ಕೆ ನುಸುಳಿತು. ಆಕಸ್ಮಿಕವಾಗಿ ನಾಯಿಯೊಂದು ಮೈದಾನಕ್ಕೆ ಪ್ರವೇಶಿಸಿದಾಗ ಎಲ್ಲರ ಗಮನ ಅದರತ್ತ ಹರಿಯಿತು. ಪರಿಣಾಮವಾಗಿ ಪಂದ್ಯ ಸ್ವಲ್ಪ ಸಮಯ ಸ್ಥಗಿತವಾಯಿತು.

ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಟೀ ವಿರಾಮಕ್ಕೆ ಮೊದಲೇ ಕ್ರಮವಾಗಿ 14ನೆ ಹಾಗೂ 10ನೆ ಶತಕ ಪೂರೈಸುವ ಧಾವಂತದಲ್ಲಿದ್ದರು. ಆದರೆ, ನಾಯಿಯ ಪ್ರವೇಶದಿಂದಾಗಿ ಅನಿವಾರ್ಯವಾಗಿ ಕೆಲವು ಓವರ್‌ಗಳು ಬಾಕಿಯಿರುವಾಗಲೇ ಟೀ ವಿರಾಮವನ್ನು ಪಡೆಯಬೇಕಾಯಿತು.

ಆಟಗಾರರು ಹಾಗೂ ಮೈದಾನದ ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ನಾಯಿಯನ್ನು ತಕ್ಷಣವೇ ಮೈದಾನದಿಂದ ಹೊರಗೆ ಓಡಿಸಲು ಸಾಧ್ಯವಾಗಲಿಲ್ಲ. ನಾಯಿಯ ಪ್ರವೇಶದಿಂದಾಗಿ ಇಂಗ್ಲೆಂಡ್ ಆಟಗಾರರು ಸ್ವಲ್ಪ ನಿರಾಳರಾದರು. ಹಸಿರು ಹುಲ್ಲು ಅಂಗಳವನ್ನು ಬಿಟ್ಟುಹೋಗಲು ಇಷ್ಟಪಡದ ನಾಯಿ ಅಲ್ಲಿಯೇ ಸುತ್ತುಹಾಕತೊಡಗಿತು.

ಕೊನೆಗೂ ಸಿಬ್ಬಂದಿ ನಾಯಿಯನ್ನು ಹೊರಗೆ ಓಡಿಸಲು ಯಶಸ್ವಿಯಾದರು. ಸ್ಟೇಡಿಯಂನೊಳಗೆ ನಾಯಿಗಳು ಪ್ರವೇಶಿಸಿದ್ದು ಇದೇ ಮೊದಲಲ್ಲ. 2016ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ರೈಸಿಂಗ್ ಪುಣೆ ವಾರಿಯರ್ಸ್‌ ನಡುವೆ ನಡೆದ ಐಪಿಎಲ್ ಪಂದ್ಯದ ವೇಳೆ ನಾಯಿಯೊಂದು ಪ್ರವೇಶಿಸಿ ಪ್ರೇಕ್ಷಕರ ಹಾಗೂ ಆಟಗಾರರ ಮನಸ್ಸನ್ನು ಕೆಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News