×
Ad

110 ವರ್ಷಗಳಲ್ಲಿ ಪ್ರಪ್ರಥಮ ದಾಖಲೆ ಮಾಡಿದ ಜೇಮ್ಸ್ ಆ್ಯಂಡರ್ಸನ್

Update: 2016-11-21 18:54 IST

ವಿಶಾಖಪಟ್ಟಣ, ನ.21: ಭಾರತ ವಿರುದ್ಧ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಅಂದುಕೊಂಡಂತೆ ಏನೂ ನಡೆಯಲಿಲ್ಲ. ಬೌಲರ್‌ಗಳು ವಿರಾಟ್ ಕೊಹ್ಲಿ ಅವರಿಂದ ಚೆನ್ನಾಗಿ ದಂಡಿಸಲ್ಪಟ್ಟರೆ, ಬ್ಯಾಟ್ಸ್‌ಮನ್‌ಗಳಿಗೆ ಸ್ಪಿನ್ನ್ರರ್‌ಗಳಾದ ಆರ್.ಅಶ್ವಿನ್ ಹಾಗೂ ಜಯಂತ್ ಯಾದವ್ ಇನ್ನಿಲ್ಲದಂತೆ ಕಾಡಿದರು. ಪರಿಣಾಮ ಇಂಗ್ಲೆಂಡ್ ತಂಡ ಭಾರತ ವಿರುದ್ಧ ಎರಡನೆ ಗರಿಷ್ಠ ಅಂತರದ ರನ್‌ಗಳಿಂದ(246) ಸೋತಿದೆ.

ದ್ವಿತೀಯ ಟೆಸ್ಟ್ ಪಂದ್ಯದ ಕೊನೆಯಲ್ಲಿ ಬೌಲರ್ ಜೇಮ್ಸ್ ಆ್ಯಂಡರ್ಸನ್ 110 ವರ್ಷಗಳಲ್ಲಿ ಮೊತ್ತ ಮೊದಲ ಬಾರಿ ದಾಖಲೆ ಯೊಂದನ್ನು ನಿರ್ಮಿಸಿದರು.

ಭುಜದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಆ್ಯಂಡರ್ಸನ್ ಭಾರತ ವಿರುದ್ಧದ 2ನೆ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಈ ಮೂಲಕ 1906ರಲ್ಲಿ ತಮ್ಮದೇ ದೇಶದ ಎರ್ನೀ ಹ್ಯಾಯ್ಸಾ ನಿರ್ಮಿಸಿದ್ದ ಅನಪೇಕ್ಷಿತ ದಾಖಲೆಯನ್ನು ಮುರಿದರು.

ಎರ್ನೀ 1906ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಮೊದಲ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂಗ್ಲೆಂಡ್‌ನ ಒಟ್ಟು ನಾಲ್ವರು ಬ್ಯಾಟ್ಸ್‌ಮನ್‌ಗಳು ಎರಡೂ ಇನಿಂಗ್ಸ್‌ನಲ್ಲಿ ಶೂನ್ಯ ಸಂಪಾದಿಸಿದ್ದರು. 1892ರಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ವಿಲಿಯಮ್ ಅಟ್ವೆಲ್ ಎರಡೂ ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿರುವ ಇಂಗ್ಲೆಂಡ್‌ನ ಮೊದಲ ಆಟಗಾರ.

 ಸತತ ಇನಿಂಗ್ಸ್‌ಗಳಲ್ಲಿ ಸತತ ಶೂನ್ಯ ಸುತ್ತಿದ ದಾಖಲೆ ಇಬ್ಬರ ಹೆಸರಲ್ಲಿದೆ. ಆಸ್ಟ್ರೇಲಿಯದ ಬಾಬ್ ಹೋಲ್ಯಾಂಡ್ ಹಾಗೂ ಭಾರತದ ಅಜಿತ್ ಅಗರ್ಕರ್ ಸತತ 5 ಇನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

ಬೌಲಿಂಗ್‌ನಲ್ಲಿ ಅಮೋಘ ಸಾಧನೆ ಮಾಡಿರುವ ಆ್ಯಂಡರ್ಸನ್ ಈ ಹಿಂದೆ ಸತತ 54 ಇನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗದೇ ಇರುವ ದಾಖಲೆಯನ್ನು ಮಾಡಿದ್ದರು. ಅವರ ಈ ದಾಖಲೆ 2009ರ ಆ್ಯಶಸ್ ಸರಣಿಯಲ್ಲಿ ಪತನಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News