ಎಟಿಪಿ ರ್ಯಾಂಕಿಂಗ್: ನಂ.1 ಸ್ಥಾನ ದೃಢಪಡಿಸಿದ ಮರ್ರೆ

Update: 2016-11-22 18:19 GMT

ಪ್ಯಾರಿಸ್, ನ.22: ಬ್ರಿಟನ್‌ನ ಟೆನಿಸ್ ಸ್ಟಾರ್ ಆ್ಯಂಡಿ ಮರ್ರೆ ಸೋಮವಾರ ಅಧಿಕೃತವಾಗಿ ಎಟಿಪಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ದೃಢಪಡಿಸಿದ್ದಾರೆ. ವರ್ಷದ ಕೊನೆಯಲ್ಲಿ ಮರ್ರೆ ಒಟ್ಟು 12,685 ಅಂಕ ಗಳಿಸಿದ್ದಾರೆ.

ರವಿವಾರ ಲಂಡನ್‌ನಲ್ಲಿ ನಡೆದ ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಮರ್ರೆ ವಿರುದ್ಧ ಸೋತಿರುವ ನೊವಾಕ್ ಜೊಕೊವಿಕ್ ಒಟ್ಟು 11,780 ಅಂಕದೊಂದಿಗೆ 2016ರ ಋತುವನ್ನು ದ್ವಿತೀಯ ಸ್ಥಾನದೊಂದಿಗೆ ಕೊನೆಗೊಳಿಸಿದರು.

ಕೆಲವು ದಿನಗಳ ಹಿಂದೆ ಪ್ಯಾರಿಸ್ ಮಾಸ್ಟರ್ಸ್‌ ಪ್ರಶಸ್ತಿಯನ್ನು ಜಯಿಸಿದ ತಕ್ಷಣ ಮರ್ರೆ ವೃತ್ತಿಜೀವನದಲ್ಲಿ ಮೊದಲ ಬಾರಿ ವಿಶ್ವದ ನಂ.1 ಆಟಗಾರನಾಗಿ ಹೊರಹೊಮ್ಮಿದ್ದರು.

ಲಂಡನ್‌ನಲ್ಲಿ ನಡೆದ ಎಟಿಪಿ ವರ್ಲ್ಡ್ ಟೂರ್ ಫೈನಲ್‌ನಲ್ಲೂ ಶ್ರೇಷ್ಠ ಫಾರ್ಮ್‌ನ್ನು ಮುಂದುವರಿಸಿದ್ದ ಆ್ಯಂಡಿ ಮರ್ರೆ ಅವರು ಜೊಕೊವಿಕ್‌ರನ್ನು 6-3, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಮೊತ್ತ ಮೊದಲ ಬಾರಿ ಟೂರ್ ಫೈನಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು.

ಮರ್ರೆ ಈ ವರ್ಷ ಎರಡನೆ ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದಲ್ಲದೆ, ಒಲಿಂಪಿಕ್ಸ್ ಕಿರೀಟವನ್ನು ಧರಿಸಿದ್ದರು. 1973ರಲ್ಲಿ ಎಟಿಪಿ ರ್ಯಾಂಕಿಂಗ್ ಶುರುವಾದ ಬಳಿಕ ವರ್ಷಾಂತ್ಯದಲ್ಲಿ ಪ್ರತಿಷ್ಠಿತ ನಂ.1 ಸ್ಥಾನವನ್ನು ಅಲಂಕರಿಸಿದ 17ನೆ ಆಟಗಾರ ಆ್ಯಂಡಿ ಮರ್ರೆ.

2003ರ ಬಳಿಕ 9ನೆ ಸ್ಥಾನದಿಂದ ನಂ.1 ಸ್ಥಾನಕ್ಕೇರಿದ ಮೊದಲ ಆಟಗಾರ ಮರ್ರೆ. 2003ರಲ್ಲಿ ಆ್ಯಂಡಿ ರಾಡಿಕ್ ಕೊನೆಯ ಬಾರಿ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News