ತ್ರಿಕೋನ ಸರಣಿ: ಝಿಂಬಾಬ್ವೆ ಫೈನಲ್‌ಗೆ
ಬುಲಾವಯೊ, ನ.25: ಡಕ್‌ವರ್ತ್ ಲೂಯಿಸ್ ನಿಯಮದಡಿ ವೆಸ್ಟ್‌ಇಂಡೀಸ್ ತಂಡವನ್ನು 5 ರನ್‌ಗಳ ಅಂತರದಿಂದ ಮಣಿಸಿದ ಆತಿಥೇಯ ಝಿಂಬಾಬ್ವೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದೆ. ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.
ಶುಕ್ರವಾರ ಇಲ್ಲಿ ನಡೆದ ಮಳೆ ಬಾಧಿತ ಏಕದಿನ ಪಂದ್ಯದಲ್ಲಿ ಟೆಂಡೈ ಚಿಸೊರೊ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನಿರ್ಣಾಯಕ ಕೊಡುಗೆ ನೀಡಿದರು. ಅಜೇಯ 42 ರನ್ ಗಳಿಸಿದ ಚಿಸೊರೊ ಬೌಲಿಂಗ್‌ನಲ್ಲಿ 6 ಓವರ್‌ಗಳಲ್ಲಿ 23 ರನ್‌ಗೆ 2 ವಿಕೆಟ್ ಉರುಳಿಸಿದ್ದರು.
ವಿಂಡೀಸ್‌ನ ಸ್ಪಿನ್‌ದ್ವಯರಾದ ದೇವೇಂದ್ರ ಬಿಶು ಹಾಗೂ ಅಶ್ಲೆ ನರ್ಸ್(ತಲಾ 3 ವಿಕೆಟ್) ಅವರ ದಾಳಿಗೆ ಸಿಲುಕಿದ ಝಿಂಬಾಬ್ವೆ ಒಂದು ಹಂತದಲ್ಲಿ 89 ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಸಿಕಂದರ್ ರಝಾ(ಅಜೇಯ 76) ಹಾಗೂ ಚಿಸೊರೊ ಸಾಹಸದಿಂದ 49 ಓವರ್‌ಗಳಲ್ಲಿ 218 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ವಿಂಡೀಸ್ 29 ಓವರ್‌ಗಳಲ್ಲಿ 5 ವಿಕೆಟ್‌ನಷ್ಟಕ್ಕೆ 124 ರನ್ ಗಳಿಸಿದ್ದಾಗ ಭಾರೀ ಮಳೆ ಆಗಮಿಸಿತು. ಡಿಎಲ್ ನಿಯಮದಂತೆ ಝಿಂಬಾಬ್ವೆ 5 ರನ್ ಅಂತರದ ಜಯ ಸಾಧಿಸಿತು.