ದೇಶದಲ್ಲಿ ಸಿನೆಮಾ ತಯಾರಕರಿಗೆ ವಾಕ್‌ಸ್ವಾತಂತ್ರ ಇಲ್ಲ: ಪ್ರಕಾಶ್ ಝಾ
ಪಣಜಿ, ನ.26: ಈ ದೇಶದಲ್ಲಿ ಅಪ್ಪಟ ರಾಜಕೀಯ ಚಿತ್ರವನ್ನು ನಿರ್ಮಿಸಲು ಸಾಧ್ಯವೇ ಇಲ್ಲ ಎಂದು ಖ್ಯಾತ ಚಿತ್ರ ನಿರ್ಮಾಪಕ, ನಿರ್ದೇಶಕ ಪ್ರಕಾಶ್ ಝಾ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ 47ನೆ ಅಂತಾರಾಷ್ಟ್ರೀಯ ಚಿತ್ರೋತ್ಸವದ ಅಂಗವಾಗಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೀವು ಬಯಸಿದ್ದನ್ನು ಹೇಳಬಹುದಾದ ವಾಕ್‌ಸ್ವಾತಂತ್ರ ಇರುವ, ವಿಮರ್ಶಾತ್ಮಕ, ವಿಶ್ಲೇಷಾತ್ಮಕ ಅಪ್ಪಟ ರಾಜಕೀಯ ಸಿನೆಮಾ ಮಾಡಲು ಈ ರಾಷ್ಟ್ರದಲ್ಲಿ ಸಾಧ್ಯವಿಲ್ಲ ಎಂದ ಅವರು, ಈ ಸ್ಥಿತಿ ಬದಲಾಗಬಹುದು ಎಂದು ಆಶಿಸಲಾಗದು. ಇದಕ್ಕೆ ಚಾರಿತ್ರಿಕ, ಪೌರಾಣಿಕ ಕಾರಣಗಳಿರಬಹುದು. ಭಾರತದಲ್ಲಿ ಸಮುದಾಯಗಳು ಸರಕಾರಕ್ಕಿಂತ ಹೆಚ್ಚು ಬಲಿಷ್ಠವಾಗಿವೆ ಎಂಬುದು ನನ್ನ ಅಭಿಮತ. ಇದು ವಾಸ್ತವಿಕ ವಿಷಯ ಎಂದರು. ಒಂದು ಸಿನೆಮಾದಲ್ಲಿ ಯಾರಾದರೊಬ್ಬರ ಹೆಸರನ್ನು ಉಲ್ಲೇಖಿಸಿದರೆ ಇದನ್ನು ಅಪರಾಧ ಎಂದು ಪರಿಗಣಿಸಿ ನಿಮ್ಮನ್ನು ಕೊಲ್ಲುವ ಹಂತಕ್ಕೂ ತಲುಪಬಹುದು. ದೇಶವನ್ನಾಳಿದ ರಾಜರು, ಅಥವಾ ಸರಕಾರಗಳ ಬಗ್ಗೆ ನೈಜ ಚಿತ್ರಣ ರೂಪಿಸುವಲ್ಲಿ ನಮಗೆ ಹಿಂಜರಿಕೆ ಇದೆ. ಇದು ನಮ್ಮ ವಂಶವಾಹಿನಿಯಲ್ಲೇ ಬಂದಿದೆ. ಭಾರತೀಯರು ವಾದಪ್ರಿಯರು, ಎಲ್ಲವನ್ನೂ ಪ್ರಶ್ನಿಸುವವರು. ಸಿನೆಮಾ ಅಥವಾ ಇತರ ಮಾಧ್ಯಮದಲ್ಲಿ ಓರ್ವ ವ್ಯಕ್ತಿಯ ಹೆಸರನ್ನು ನೀವು ಪ್ರಸ್ತಾವಿಸಿದರೆ, ಆ ವ್ಯಕ್ತಿಯ ಸಮುದಾಯದ ಮಂದಿಯಿಂದ ನಿಮಗೆ ಬೆದರಿಕೆ ಕರೆ ಬರುತ್ತದೆ. ನಿಮ್ಮನ್ನು ಅವರು ಕೊಲ್ಲಲೂಬಹುದು ಎಂದರು. ಇದು ನನ್ನ ಅನುಭವದ ಮಾತು. ನನ್ನ ಸಿನೆಮಾಗಳು ಬಿಡುಗಡೆಯಾಗುವ ಮೊದಲೇ ಸಮಾಜದ ಜನರು, ರಾಜಕೀಯ ಪಕ್ಷಗಳವರು, ಮತ್ತು ಇತರ ಜನರು ನನ್ನ ವಿರುದ್ಧ ಆಕ್ರಮಣಕ್ಕೆ ಮುಂದಾಗುತ್ತಾರೆ. ಆದ್ದರಿಂದ, ಸಿನೆಮಾ, ಸಾಹಿತ್ಯ, ಸಂಸ್ಕೃತಿ.. ಇತ್ಯಾದಿ ವಿಷಯಗಳಲ್ಲಿ ನಮ್ಮ ದೇಶದಲ್ಲಿ ವಾಕ್‌ಸ್ವಾತಂತ್ರ ಇಲ್ಲವೇ ಇಲ್ಲ. ಸೈದ್ಧಾಂತಿಕವಾಗಿ ಸ್ವಸ್ಥ ಮನಸ್ಸಿನ ಕೆಲವೇ ವ್ಯಕ್ತಿಗಳು ಸಿನೆಮಾವನ್ನು ಅಭಿವ್ಯಕ್ತಿ ಪ್ರಕ್ರಿಯೆಯ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದವರು ಅಭಿಪ್ರಾಯಪಟ್ಟರು.