ನೋಟು ರದ್ದತಿ ವೈಫಲ್ಯ ಶತ್ರುಘ್ನ ಸಿನ್ಹಾ

Update: 2016-11-26 18:35 GMT

ಹೊಸದಿಲ್ಲಿ, ನ.26: ನೋಟು ನಿಷೇಧ ತೀರ್ಮಾನದ ಕುರಿತಂತೆ ಪ್ರಧಾನಿಯ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ಅವರ ಜೊತೆಗಿರುವ ಬಿಜೆಪಿಯ ತಂಡ ಸಂಪೂಣ‰ ವಿಫಲವಾಗಿದೆ ಅನ್ನಿಸುತ್ತದೆ ಎಂದು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ನೋಟು ರದ್ದತಿಯ ಕುರಿತ ತನ್ನ ಟೀಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಾನು ಈ ಸಕಾಲಿಕ, ಧೈರ್ಯದ, ಜಾಣ ಹಾಗೂ ಮಹಾನ್ ಕ್ರಮಕ್ಕಾಗಿ ಪ್ರಧಾನಿಗೆ ತಲೆ ಬಾಗುತ್ತೇನೆ. ಆದರೆ, ಅವರ ತಂಡವು ಅವರನ್ನು ಕೆಳಗೆ ದೂಡುತ್ತಿದೆಯೋ ಎಂದು ತನಗನ್ನಿಸುತ್ತಿದೆಯೆಂದ ಅವರು, ಚಲಾವಣೆಯಲ್ಲಿದ್ದ ಶೇ.86ರಷ್ಟು ನೋಟುಗಳ ಹಠಾತ್ ಹಿಂದೆಗೆತದಿಂದ ಮಹಿಳೆಯರು ಹಾಗೂ ಗ್ರಾಮೀಣಭಾರತ ಶಿಕ್ಷೆ ಅನುಭವಿಸುತ್ತಿದೆಯೆಂಬುದನ್ನು ಪುನರುಚ್ಚರಿಸಿದ್ದಾರೆ.
ನೋಟು ರದ್ದತಿಯ ನಿರ್ಧಾರಕ್ಕೆ ಜನರ ಪ್ರತಿಕ್ರಿಯೆಯನ್ನು ತಿಳಿಯಲು ಪ್ರಧಾನಿ ತನ್ನ ಅಧಿಕೃತ ಆ್ಯಪ್‌ನಲ್ಲಿ ನಡೆಸಿದ್ದ ಸಮೀಕ್ಷೆಗೆ ಲಭಿಸಿದ್ದ ಭಾರೀ ಬೆಂಬಲವನ್ನು ಚಂದಾದಾರರನ್ನು 'ಹುಚ್ಚರ ಸ್ವರ್ಗದಲ್ಲಿರಿಸಲು' ನಡೆಸಿದ್ದ ಯೋಜಿತ ಸಮೀಕ್ಷೆಯೆಂದು ಎರಡು ದಿನಗಳ ಹಿಂದಷ್ಟೇ ಸಿನ್ಹಾ ಟ್ವೀಟಿಸಿದ್ದರು.


ಗ್ರಾಮೀಣ ಭಾರತೀಯರ ಕೈ ಬರಿದು ಮಾಡಿರುವ ಈ ಚಿಂತಾಜನಕ ಬಿಕ್ಕಟ್ಟಿನಿಂದ ಜನರನ್ನು ಶೀಘ್ರವಾಗಿ ಪಾರು ಮಾಡಲು ಪ್ರಧಾನಿ, ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿಯವರ ನೇತೃತ್ವ ಹಾಗೂ ಮಾಜಿ ವಿತ್ತ ಸಚಿವ ಯಶ್ವಂತ್ ಸಿನ್ಹಾ ಸದಸ್ಯನಾಗಿರುವ ಸಲಹಾ ಸಮಿತಿಯೊಂದನ್ನು ರಚಿಸಬೇಕು. ಅದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗರನ್ನೂ ಸೇರಿಸಬಹುದೆಂದು ಅವರು ಸಲಹೆ ನೀಡಿದ್ದಾರೆ.


ಬಿಜೆಪಿಯ ಕುರಿತು ತಾನು ಸಾರ್ವಜನಿಕವಾಗಿ ಟೀಕಿಸುತ್ತೇನೆ ಎಂದ ಮಾತ್ರಕ್ಕೆ ಅದು ತೆಗೆದುಕೊಳ್ಳುವ ಪ್ರತಿಯೊಂದು ಮಹತ್ವದ ನಿರ್ಣಯದ ಬಗ್ಗೆ ಅಡ್ಡ ಮಾತನಾಡುತ್ತೇನೆಂದು ಭಾವಿಸಬಾರದೆಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News