ಜೇಟ್ಲಿಯಿಂದ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಮರ್ಥನೆ

Update: 2016-11-27 11:01 GMT

ಹೊಸದಿಲ್ಲಿ,ನ.27: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ ಅವರು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್‌ರನ್ನು ಕಟುವಾಗಿ ಟೀಕಿಸಿರುವ ಹಿನ್ನೆಲೆಯಲ್ಲಿ ರವಿವಾರ ಅವರ ರಕ್ಷಣೆಗೆ ಧಾವಿಸಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು, ಇದು ‘ಅನ್ಯಾಯದ ದಾಳಿ ’ಯಾಗಿದೆ ಮತ್ತು ತಮ್ಮನ್ನು ಸಮರ್ಥಿಸಿಕೊಳ್ಳಲಾಗದವರನ್ನು ಟೀಕಿಸುವುದರಿಂದ ರಾಜಕಾರಣಿಗಳು ದೂರವಿರಬೇಕು ಎಂದು ಟ್ವೀಟಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ರಮೇಶ ಅವರು ನ್ಯಾಷನಲ್ ಹೆರಾಲ್ಡ್‌ನಲ್ಲಿ ಬರೆದಿರುವ ಲೇಖನ ವೊಂದರಲ್ಲಿ ಸರಕಾರವು ತನ್ನ ದಿಢೀರ್ ನೋಟು ನಿಷೇಧ ಕ್ರಮದ ಮೂಲಕ ಆರ್‌ಬಿಐ ಅನ್ನು ಅಂಧಕಾರದಲ್ಲಿರಿಸಿತ್ತು ಎಂದು ಆರೋಪಿಸಿದ್ದಾರೆ. ನೋಟು ನಿಷೇಧ ಕುರಿತು ಆರ್‌ಬಿಐನ ಸನ್ನದ್ಧತೆಯ ಬಗ್ಗೆ ರಾಷ್ಟ್ರವನ್ನು ದಾರಿ ತಪ್ಪಿಸುವ ಅಥವಾ ಆರ್‌ಬಿಐ ಸ್ವಾಯತ್ತತೆಯನ್ನು ಬಲಿಗೊಡುವ ತಪ್ಪನ್ನು ಮಾಡಿದ್ದಾರೆ. ಯಾವುದು ಹೇಗಿದ್ದರೂ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಲೇಬೇಕು ಎಂದು ಅವರು ಹೇಳಿದ್ದರು.

 ಆರ್‌ಬಿಐ ಭಾರತದ ಸಕ್ಷಮ ಹಣಕಾಸು ಪ್ರಾಧಿಕಾರವಾಗಿದೆ ಮತ್ತು ಭಾರತದಲ್ಲಿನ ಎಲ್ಲ ನಿವಾಸಿಗಳಿಗೆ ಕರೆನ್ಸಿ ನೋಟುಗಳನ್ನು ಲಭ್ಯವಾಗಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧ ಯೋಜನೆಗೆ ಪಟೇಲ್ ನೇತೃತ್ವದ ಆರ್‌ಬಿಐ ತನ್ನ ಒಪ್ಪಿಗೆ ನೀಡಿದ್ದಿದ್ದರೆ ಅದು ಕರೆನ್ಸಿ ನೋಟುಗಳನ್ನು ಸುಲಭವಾಗಿ ಲಭ್ಯವಾಗಿಸುವ ವಿಶ್ವಾಸವನ್ನು ಹೊಂದಿತ್ತು ಎಂದಾಗುತ್ತದೆ. ಆದರೆ ಈ ವಿಶ್ವಾಸ ಕೇವಲ ತೋರಿಕೆಯದಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ ಎಂದಿದ್ದ ಅವರು, ದೇಶದ ಹಣಕಾಸು ವ್ಯವಸ್ಥೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೋಟುಗಳಿಲ್ಲ ಮತ್ತು ಈ ಕೊರತೆ ತಿಂಗಳುಗಳಲ್ಲದಿದ್ದರೆ ಕನಿಷ್ಠ ಕೆಲವು ವಾರಗಳಾದರೂ ಮುಂದುವರಿಯುತ್ತದೆ ಎಂದು ದೂರಿದ್ದರು.

ನೋಟು ನಿಷೇಧದಿಂದಾಗಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದ್ದರೂ ಪಟೇಲ್ ಅವರ ವೌನವನ್ನು ರಮೇಶ ಕಟುವಾಗಿ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News