ದೇಶದ್ರೋಹ ಆರೋಪಿಗಳು,ಹುತಾತ್ಮರ ಪಟ್ಟಿ ನೀಡುವಂತೆ ಕೇಂದ್ರಕ್ಕೆ ಸಿಐಸಿ ನಿರ್ದೇಶ

Update: 2016-11-27 12:04 GMT

ಹೊಸದಿಲ್ಲಿ,ನ.27: ‘ದೇಶಭಕ್ತ ’ ಮತ್ತು ‘ದೇಶವಿರೋಧಿ ’ಪಟ್ಟಗಳು ಚರ್ಚೆಯ ಮುಖ್ಯ ವಿಷಯವಾಗಿರುವ ಈ ಸಂದರ್ಭದಲ್ಲಿ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ)ವು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪಗಳಲ್ಲಿ ದೇಶದ್ರೋಹ ಪ್ರಕರಣಗಳನ್ನು ಎದುರಿಸುತ್ತಿರುವರ ಪಟ್ಟಿಯನ್ನು ಬಹಿರಂಗಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶ ನೀಡಿದೆ.

 ಮೊರಾದಾಬಾದ್ ನಿವಾಸಿ ಪವನ್ ಅಗರವಾಲ್ ಅವರ ಅರ್ಜಿಗೆ ಸಂಬಂಧಿಸಿದಂತೆ ಸಿಇಸಿ ಈ ನಿರ್ದೇಶ ನೀಡಿದೆ. ಅಗರವಾಲ್ ಅವರು ಪ್ರಧಾನಿ ಕಚೇರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಹುತಾತ್ಮರು ಮತ್ತು ದೇಶವಿರೋಧಿಗಳು ಎಂದು ಘೋಷಿಸಲ್ಪಟ್ಟಿರುವ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಕೋರಿದ್ದರು.

ಅವರ ಅರ್ಜಿಯನ್ನು ಪ್ರಧಾನಿ ಕಚೇರಿಯು ಗೃಹ ಸಚಿವಾಲಯಕ್ಕೆ ಕಳುಹಿಸಿತ್ತು. ದೇಶಭಕ್ತರು,ಹುತಾತ್ಮರು ಮತ್ತು ದೇಶವಿರೋಧಿಗಳೆಂದು ಜನರನ್ನು ವರ್ಗೀಕರಿಸಿರುವ ಯಾವುದೇ ಪಟ್ಟಿ ತನ್ನ ಬಳಿಯಿಲ್ಲ, ಹೀಗಾಗಿ ಅರ್ಜಿಯಲ್ಲಿ ಕೋರಲಾಗಿರುವ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವಾಲಯವು ಅಗರವಾಲ್‌ಗೆ ಉತ್ತರಿಸಿತ್ತು. ಅವರು ಇದರ ವಿರುದ್ಧ ಸಿಐಸಿಗೆ ಮೇಲ್ಮನವಿ ಸಲ್ಲಿಸಿದ್ದರು.

ಮಾಹಿತಿ ಆಯುಕ್ತ ಸುಧೀರ ಭಾರ್ಗವ ಅವರೆದುರು ವಿಚಾರಣೆ ಸಂದರ್ಭ ಅಗರವಾಲ್ ಅವರು, ಹಲವಾರು ಜನರ ವಿರುದ್ಧ ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೀಗಾಗಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಕುರಿತ ವಿವರಗಳು ಗೃಹ ಸಚಿವಾಲಯದ ಬಳಿ ಇರಲೇಬೇಕು. ಇದೇ ರೀತಿ ಸಚಿವಾಲ ಯದ ಸ್ವಾತಂತ್ರ ಹೋರಾಟಗಾರರ ವಿಭಾಗವು ಸ್ವಾತಂತ್ರ ಹೋರಾಟಗಾರರು ಮತ್ತು ಹುತಾತ್ಮರ ಕುರಿತು ಮಾಹಿತಿಗಳನ್ನು ಹೊಂದಿರಬೇಕು ಎಂದು ವಾದಿಸಿದ್ದರು.

ರಾಷ್ಟ್ರೀಯ ಅಪರಾಧ ಅಂಕಿಅಂಶಗಳಂತೆ 2014ರಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದಂತೆ 47 ಪ್ರಕರಣಗಳು ದಾಖಲಾಗಿರುವುದನ್ನು ತಾನು ಗಮನಿಸಿದ್ದೇನೆ. ಹೀಗಾಗಿ ದೇಶದ್ರೋಹ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಕುರಿತು ಮಾಹಿತಿ ಲಭ್ಯವಿರಲೇಬೇಕು ಎಂದು ಹೇಳಿದ ಭಾರ್ಗವ ಅವರು, ಅರ್ಜಿಯಲ್ಲಿ ಕೋರಲಾಗಿರುವ ಮಾಹಿತಿಗಳು ಗೃಹ ಸಚಿವಾಲಯದ ಬಳಿ ಲಭ್ಯವಿಲ್ಲದಿದ್ದರೆ, ಆ ಮಾಹಿತಿಗಳನ್ನು ಹೊಂದಿರುವ ಸರಕಾರಿ ಇಲಾಖೆಗೆ ಅರ್ಜಿಯನ್ನು ವರ್ಗಾಯಿಸಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News