ಟ್ಯಾಕ್ಸಿ ಡ್ರೈವರ್ ಬ್ಯಾಂಕ್ ಖಾತೆಯಲ್ಲಿ 9800 ಕೋಟಿ ರೂಪಾಯಿ!

Update: 2016-11-29 04:10 GMT

ಅಮೃತಸರ, ನ.29: ಇಲ್ಲಿನ ಟ್ಯಾಕ್ಸಿ ಚಾಲಕ ಬಲ್ವಿಂದರ್ ಸಿಂಗ್ ಅವರಿಗೆ ನವೆಂಬರ್ 4ರಂದು ಅಚ್ಚರಿ ಕಾದಿತ್ತು. ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾದ ತಮ್ಮ ಉಳಿತಾಯ ಖಾತೆಯಲ್ಲಿ 98,05,95,12,231 ರೂಪಾಯಿ ಜಮೆ ಆಗಿರುವುದು ಗಮನಕ್ಕೆ ಬಂದಾಗ ಅವರಿಗೆ ಅಚ್ಚರಿಯಿಂದ ಮಾತೇ ಹೊರಡಲಿಲ್ಲ. ಅಂದರೆ 9,806 ಕೋಟಿ ರೂಪಾಯಿ; ಫ್ಲಿಪ್‌ಕಾರ್ಟ್‌ನ ಕಳೆದ ಒಂದು ವರ್ಷದ ಆದಾಯದಷ್ಟು!
ಆದರೆ ಉಳಿತಾಯ ಖಾತೆಗೆ ಜಮೆ ಆದ ಅತಿಹೆಚ್ಚು ಮೊತ್ತದ ಆ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಮರುದಿನವೇ ಅವರ ಖಾತೆಯಿಂದ ಈ ಹಣವನ್ನು ವಾಪಾಸು ಪಡೆಯಲಾಯಿತು.
"ನಾನು ಹಲವು ಬಾರಿ ಬ್ಯಾಂಕಿಗೆ ಹೋಗಿದ್ದೆ. ಆದರೆ ಯಾರೂ ನನ್ನ ಮಾತು ಕೇಳಲಿಲ್ಲ. ಇದರ ಬದಲು ನವೆಂಬರ್ 7ರಂದು ನನ್ನ ಪಾಸ್‌ಬುಕ್ ಪಡೆದುಕೊಂಡರು. ಬಳಿಕ ಈ ದೊಡ್ಡ ಮೊತ್ತದ ಪಾವತಿಯನ್ನು ನಮೂದಿಸದ ಹೊಸ ಪಾಸ್‌ಬುಕ್ ಕೊಟ್ಟರು" ಎಂದು ಸಿಂಗ್ ವಿವರಿಸಿದರು. ಪ್ರಧಾನಮಂತ್ರಿ ಜನಧನ್ ಯೋಜನೆಯಡಿ ಆರಂಭಿಸಿದ ಇವರ ಖಾತೆಯಲ್ಲಿ ಸುಮಾರು 3,000 ರೂಪಾಯಿ ಇರುತ್ತಿತ್ತು.
ಈ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆ ಮಾಡಲು ಬ್ಯಾಂಕ್ ಶಾಖೆಯ ಪ್ರಬಂಧಕ ರವೀಂದ್ರ ಕುಮಾರ್ ನಿರಾಕರಿಸಿದರು. ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಅಚ್ಚರಿಗೆ ಲೀಡ್ ಬ್ಯಾಂಕ್ ಪ್ರಬಂಧಕ ಸಂದೀಪ್ ಗರ್ಗ್ ನೀಡುವ ಕಾರಣವೆಂದರೆ, "ಈ ಖಾತೆದಾರ ಬ್ಯಾಂಕಿನ ನಿಯೋಜಿತ ವೆಂಟರ್ ಆಗಿದ್ದ. 200 ರೂಪಾಯಿಯ ಕ್ರೆಡಿಟ್ ಎಂಟ್ರಿ ನಮೂದಿಸುವ ವೇಳೆ, ಲೆಕ್ಕ ಶಾಖೆಯ ಸಹಾಯಕ ವ್ಯವಸ್ಥಾಪಕರು ತಪ್ಪಾಗಿ ಬ್ಯಾಂಕಿನ 11 ಅಂಕಿಗಳ ಆಂತರಿಕ ಬ್ಯಾಂಕಿಂಗ್ ಜನರಲ್ ಲೆಡ್ಜರ್ ಖಾತೆ ಸಂಖ್ಯೆಯನ್ನು ಹಣದ ಕಲಂನಲ್ಲಿ ನಮೂದಿಸಿರುವ ಸಾಧ್ಯತೆ ಇದೆ. ಮರುದಿನ ಅದು ಗೊತ್ತಾದಾಗ ತಪ್ಪು ಸರಿಪಡಿಸಲಾಗಿದೆ"
ಜಿಲ್ಲಾಧಿಕಾರಿ ಭೂಪೀಂದರ್ ಸಿಂಗ್ ರಾಯ್ ಈ ಘಟನೆಯನ್ನು ಖಚಿತಪಡಿಸಿದ್ದಾರೆ. ಹಲವು ಕಾರಣಗಳಿಂದ ಬ್ಯಾಂಕ್ ಅಧಿಕಾರಿ ಬೇಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿರುವುದು ಸ್ಪಷ್ಟ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಖಾತೆದಾರ ಇದನ್ನು ಗಮನಕ್ಕೆ ತರುವ ಮೊದಲೇ ಆತ ಶಾಖೆಗೆ ಭೇಟಿ ನೀಡಿದಾಗ ಅದನ್ನು ಸರಿಪಡಿಸಬಹದಿತ್ತು ಎಂದು ಅವರು ಹೇಳಿದ್ದಾರೆ. ಬಾರಾನಾಲಾ, ಸಂಗ್ರೂರು ಹಾಗು ಪಾಟಿಯಾಲದಿಂದ ಆಗಮಿಸಿದ್ದ ಆದಾಯ ತೆರಿಗೆ ಅಧಿಕಾರಿಗಳ ತಂಡ ಮಧ್ಯರಾತ್ರಿವರೆಗೂ ಈ ಬಗ್ಗೆ ತನಿಖೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News