×
Ad

ಸರಕಾರದ ಒಪ್ಪಿಗೆಯಿಲ್ಲದೆ ನೇಪಾಳದಲ್ಲಿ 150 ಕೋಟಿ ಹೂಡಿಕೆ ಮಾಡಿದ ರಾಮ್‌ದೇವ್

Update: 2016-11-29 19:41 IST

ಕಠ್ಮಂಡು, ನ.29: ಯೋಗ ಗುರು ರಾಮ್‌ದೇವ್ ಒಡೆತನದ ಪತಂಜಲಿ ಆಯುರ್ವೇದ ಗ್ರೂಫ್ ಸಂಸ್ಥೆ ಸರಕಾರದ ಒಪ್ಪಿಗೆ ಪಡೆಯದೆ 150 ಕೋಟಿಗೂ ಹೆಚ್ಚು ಮೊತ್ತವವನ್ನು ನೇಪಾಳದಲ್ಲಿ ಹೂಡಿಕೆ ಮಾಡಿದೆ ಎಂದು ನೇಪಾಳದ ಮಾಧ್ಯಮವೊಂದು ವರದಿ ಮಾಡಿದೆ.

ವಿದೇಶಿ ಹೂಡಿಕೆ ಮತ್ತು ತಂತ್ರಜ್ಞಾನ ವರ್ಗಾವಣೆ ಕಾಯ್ದೆಯ ಪ್ರಕಾರ ಯಾವುದೇ ವಿದೇಶಿ ಹೂಡಿಕೆದಾರರು ನೇಪಾಳದಲ್ಲಿ ಹೂಡಿಕೆ ಮಾಡುವ ಮೊದಲು ನೇಪಾಳದ ಹೂಡಿಕೆ ಸಮಿತಿ ಅಥವಾ ನೇಪಾಳ ಸರಕಾರದ ಕೈಗಾರಿಕಾ ವಿಭಾಗದ ಅನುಮತಿ ಪಡೆದಿರಬೇಕು. ಆದರೆ ರಾಮ್‌ದೇವ್ ಇದಕ್ಕೆ ತಪ್ಪಿದ್ದಾರೆ ಎಂದು ನೇಪಾಳದಲ್ಲಿ ಅತ್ಯಧಿಕ ಪ್ರಸಾರವಿರುವ ‘ಕಾಂತಿಪುರ’ ದಿನಪತ್ರಿಕೆ ವರದಿ ಮಾಡಿದೆ.

ಆದರೆ ಈ ವರದಿಯನ್ನು ನಿರಾಕರಿಸಿರುವ ರಾಮ್‌ದೇವ್, ತಮ್ಮ ಸಂಸ್ಥೆ ಸ್ಥಳೀಯ ಕಾನೂನಿಗೆ ಬದ್ಧವಾಗಿಯೇ ನೇಪಾಳದಲ್ಲಿ ಚಟುವಟಿಕೆ ನೆಡಸುತ್ತಿದೆ ಎಂದಿದ್ದಾರೆ. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಈಡೇರಿಸಿದ ಬಳಿಕವಷ್ಟೇ ನೇಪಾಳದಲ್ಲಿ ತಮ್ಮ ಸಂಸ್ಥೆಯು ಹೂಡಿಕೆ ಮಾಡಲಿದೆ. ನೇಪಾಳದಲ್ಲಿ ಕಾರ್ಯಾಚರಿಸುವ ಪತಂಜಲಿ ಯೋಗಪೀಠಕ್ಕೆ ಭಾರತದಿಂದ ಯಾವುದೇ ಹಣ ಹೂಡಲಾಗುತ್ತಿಲ್ಲ. ನೇಪಾಳದ ಉದ್ಯಮಿ ಉಪೇಂದ್ರ ಮಹತೋ ಮತ್ತವರ ಪತ್ನಿ ಸಮತಾ ಹಣ ಹೂಡುತ್ತಿದ್ದಾರೆ. ಭವಿಷ್ಯದಲ್ಲಿ ನಮ್ಮ ಹೂಡಿಕೆಯ ಅಗತ್ಯಬಿದ್ದರೆ ಆಗ ಚಾಲ್ತಿಯಲ್ಲಿರುವ ಎಲ್ಲಾ ನಿಯಮಗಳ ಅನುಸಾರವಾಗಿಯೇ ಹೂಡಿಕೆ ಮಾಡಲಾಗುವುದು ಎಂದರು.

 ನೇಪಾಳದಲ್ಲಿ ಪತಂಜಲಿ ಯೋಗಪೀಠದ ವ್ಯವಹಾರದಿಂದ ದೊರಕುವ ಆದಾಯವನ್ನು ಹೂಡಿಕೆದಾರರಿಗೆ ನೀಡಲಾಗುತ್ತಿಲ್ಲ. ಇವನ್ನು ಲೋಕೋಪಕಾರಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ನನ್ನ ಇಡೀ ಬದುಕಿನಲ್ಲಿ ಭ್ರಷ್ಟಾಚಾರ, ಕಾಳಧನ ಮತ್ತು ಆರ್ಥಿಕ  ಅವ್ಯವಹಾರದ ವಿರುದ್ಧ ಹೋರಾಡುತ್ತಲೇ ಬಂದಿರುವ ನಾನು ಆರ್ಥಿಕ ವ್ಯವಹಾರದಲ್ಲಿ ಪಾರದರ್ಶಕತೆ ಬಯಸುವವ ಎಂದಿದ್ದಾರೆ.

   ನವೆಂಬರ್ 23ರಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ರಾಮದೇವ್, ನೇಪಾಳದಲ್ಲಿ ಆಯುರ್ವೇದ ಕಾರ್ಖಾನೆಯೊಂದರಲ್ಲಿ 150 ಕೋಟಿ ರೂ. ಹೂಡಿಕೆ ಮಾಡಿದ್ದು ಭವಿಷ್ಯದಲ್ಲಿ 500 ಕೋಟಿಯಷ್ಟು ಹೆಚ್ಚುವರಿ ಹಣ ಹೂಡಿಕೆ ಮಾಡಿ ಸಂಸ್ಥೆಯ ಚಟುವಟಿಕೆಯನ್ನು ವಿಸ್ತರಿಸುವ ಯೋಜನೆಯಿದೆ ಎಂದು ತಿಳಿಸಿದ್ದರು. ಅಲ್ಲದೆ ನೇಪಾಳದಲ್ಲಿ ಒಂದು ಬಿಲಿಯನ್ ರೂ. ವೆಚ್ಚದ ಸಾವಯಮ ಔಷಧಿ ಸ್ಥಾಪಿಸಲಾಗುವುದು. ಇದರಿಂದ ಅಲ್ಲಿ 20 ಸಾವಿರ ಮಂದಿಗೆ ಉದ್ಯೋಗಾವಕಾಶ ದೊರೆಯುತ್ತದೆ ಎಂದಿದ್ದರು.

ನೇಪಾಳದ ಅಧ್ಯಕ್ಷರಾದ ಬಿದ್ಯಾದೇವಿ ಭಂಢಾರಿ ನ.24ರಂದು ನೇಪಾಳದ ಬಾರಾ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ರಾಮ್‌ದೇವ್ ಒಡೆತನದ ಪತಂಜಲಿ ಸಂಸ್ಥೆಯನ್ನು ಉದ್ಘಾಟಿಸಿದ್ದರು.

      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News