ಐದು ವರ್ಷಗಳ ಬಳಿಕ ಹಾಜಿ ಅಲಿ ದರ್ಗಾ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ ಮಹಿಳೆಯರು
ಮುಂಬೈ,ನ.30: ಸರಣಿ ಕಾನೂನು ಹೋರಾಟಗಳು ಮತ್ತು ಪ್ರತಿಭಟನೆಗಳ ಐದು ವರ್ಷಗಳ ಬಳಿಕ ಮಂಗಳವಾರ ಮಧ್ಯಾಹ್ನ ಸುಮಾರು 250 ಮಹಿಳೆಯರು ಇಲ್ಲಿಯ ಪ್ರಖ್ಯಾತ ಹಾಜಿ ಅಲಿ ದರ್ಗಾವನ್ನು ಪ್ರವೇಶಿಸಿದರು ಮತ್ತು ತುಂಬುಶ್ರದ್ಧೆಯಿಂದ ಪ್ರಾರ್ಥನೆಗಳನ್ನು ಸಲ್ಲಿಸಿದರು.
ಎನ್‌ಜಿಒ ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ(ಬಿಎಂಎಂಎ)ದ ಪದಾಧಿಕಾರಿಗಳು,ಅವರ ಬೆಂಬಲಿಗರು ಸೇರಿದಂತೆ ದೇಶಾದ್ಯಂತದಿಂದ ಆಗಮಿಸಿದ್ದ ಮಹಿಳೆಯರು ಈ ಗುಂಪಿನಲ್ಲಿದ್ದರು.
ಹಾಜಿ ಅಲಿ ದರ್ಗಾ ಟ್ರಸ್ಟ್‌ನ ಇಬ್ಬರು ಟ್ರಸ್ಟಿಗಳು ಮತ್ತು ಅಧಿಕಾರಿಗಳು ಮಹಿಳೆಯ ರನ್ನು ಸ್ವಾಗತಿಸಿ ಮುಸ್ಲಿಮ್ ಸಂತ ಸೈಯದ್ ಪೀರ್ ಹಾಜಿ ಅಲಿ ಶಾ ಬುಖಾರಿ ಅವರ ಮಝಾರ್(ಗೋರಿ) ಇರುವಲ್ಲಿಗೆ ಅವರನ್ನು ಕರೆದೊಯ್ದರು.
ಈ ಸಂದರ್ಭ ದರ್ಗಾದ ಆವರಣದಲ್ಲಿ ಕವ್ವಾಲಿ ತಂಡವೊಂದು ಸಂತರನ್ನು ಸ್ತುತಿಸುವ ಪಿಯಾ ಹಾಜಿ ಅಲಿ ಕವ್ವಾಲಿಯನ್ನು ಹಾಡುತ್ತಿತ್ತು.
ಅವರು ಟ್ರಸ್ಟಿನ ನಿಯಮಗಳನ್ನು ಪಾಲಿಸಿ ಅತ್ಯಂತ ಘನತೆಯಿಂದ ದರ್ಗಾವನ್ನು ಪ್ರವೇಶಿಸಿದರು. ವೌನವಾಗಿ ಪ್ರಾರ್ಥನೆಗಳ ಜೊತೆಗೆ ಮಝಾರ್‌ಗೆ ಹೂವುಗಳು ಮತ್ತು ಚಾದರ್‌ಗಳನ್ನು ಅರ್ಪಿಸಿದರು ಎಂದು ಟ್ರಸ್ಟಿ ಸುಹೈಲ್ ಖಂದ್ವಾನಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ದರ್ಗಾ ಪ್ರವೇಶಿಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ಮಹಿಳೆಯರಲ್ಲಿ ವಿಶಿಷ್ಟ ಅನುಭೂತಿ ಮನೆಮಾಡಿತ್ತು. ಟ್ರಸ್ಟಿಗಳು ಮತ್ತು ಅಧಿಕಾರಿಗಳು ನಮ್ಮಿಂದಿಗೆ ಸಹಕರಿಸಿದರು,ಜೊತೆಗೆ ಚಹಾ ಮತ್ತು ಉಪಹಾರದ ವ್ಯವಸ್ಥೆಯನ್ನೂ ಮಾಡಿದ್ದರು ಎಂದು ಬಿಎಂಎಂಎ ಸಹಸ್ಥಾಪಕಿ ನೂರ್‌ಜಹಾನ್ ಎಸ್.ನಿಯಾಝ್ ತಿಳಿಸಿದರು.
2012,ಜೂನ್‌ವರೆಗೆ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರಿಗೆ ಮುಕ್ತಪ್ರವೇಶವಿತ್ತು. ಆದರೆ ಬಳಿಕ ಏಕಾಏಕಿ ಅದನ್ನು ನಿಷೇಧಿಸಲಾಗಿತ್ತು.