ಐಎಸ್‌ಎಲ್ ಫೈನಲ್: ಕೊಚ್ಚಿ ಆತಿಥ್ಯ
ಕೊಚ್ಚಿ, ಡಿ.2: ಕೇರಳದ ಫುಟ್ಬಾಲ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಐಎಸ್‌ಎಲ್ ಆಡಳಿತ ಮಂಡಳಿಯು ಮೂರನೆ ಆವೃತ್ತಿಯ ಐಎಸ್‌ಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ಕೊಚ್ಚಿಯ ಜವಾಹರ್‌ಲಾಲ್ ನೆಹರೂ ಅಂತಾರಾಷ್ಟ್ರೀಯ ಸ್ಟೇಡಿಯನಲ್ಲಿ ಆಯೋಜಿಸಲು ನಿರ್ಧರಿಸಿದೆ.
ಶುಕ್ರವಾರ ಇಲ್ಲಿ ಸಭೆ ಸೇರಿದ ಐಎಸ್‌ಎಲ್‌ನ ಉನ್ನತಾಧಿಕಾರಿಗಳು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಐಎಸ್‌ಎಲ್ ಪಂದ್ಯಗಳು ನಡೆದಿರುವ 8 ತಾಣಗಳ ಪೈಕಿ ಕೊಚ್ಚಿಯಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇತರ ತಾಣಗಳಲ್ಲಿ ಮುಂಬರುವ 2017ರ ಅಂಡರ್-17 ವಿಶ್ವಕಪ್‌ನ ನವೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೊಚ್ಚಿ ತಾಣವನ್ನು ಸುಲಭವಾಗಿ ಆಯ್ಕೆಗೆ ಪರಿಗಣಿಸಲಾಯಿತು.
‘‘ಕೊಚ್ಚಿಯಲ್ಲಿ ಐಎಸ್‌ಎಲ್ ವೀಕ್ಷಿಸಲು ಭಾರೀ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದರು. ಕೊಚ್ಚಿಯಲ್ಲಿ ಫೈನಲ್ ಪಂದ್ಯ ಆಯೋಜಿಸಲು ಇದೊಂದು ಮುಖ್ಯ ಕಾರಣವಾಗಿದೆ’’ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಯು ನಾರ್ಥ್ ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ದ ಆಡಲಿರುವ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಉತ್ತೇಜನಕಾರಿಯಾಗಿದೆ. ನಾರ್ಥ್ ಈಸ್ಟ್ ವಿರುದ್ಧ ಡ್ರಾ ಇಲ್ಲವೇ ಗೆಲುವು ಸಾಧಿಸಿದರೆ ಕೇರಳ ಸೆಮಿ ಫೈನಲ್‌ಗೆ ಸ್ಥಾನವನ್ನು ಖಚಿತಪಡಿಸಲಿದೆ.
ಒಂದು ಬ್ಲಾಸ್ಟರ್ಸ್ ತಂಡ ಸೆಮಿ ಫೈನಲ್ ಪ್ಲೇ-ಆಫ್‌ಗೆ ತಲುಪಿದರೆ, ಕೇರಳದ ಅಭಿಮಾನಿಗಳಿಗೆ ಕೊಚ್ಚಿಯಲ್ಲಿ ಎರಡು ಐಎಸ್‌ಎಲ್ ಪಂದ್ಯ ವೀಕ್ಷಿಸುವ ಅವಕಾಶ ಲಭಿಸಲಿದೆ.
ಡೆಲ್ಲಿ ಡೈನಮೊಸ್, ಮುಂಬೈ ಸಿಟಿ ಎಫ್‌ಸಿ ಹಾಗೂ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಈಗಾಗಲೇ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿವೆ. ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ಹಾಗೂ ಕಳೆದ ವರ್ಷದ ರನ್ನರ್ಸ್-ಅಪ್ ಗೋವಾ ತಂಡ ಲೀಗ್ ಹಂತದಲ್ಲಿ ಸೋತು ಹೊರ ನಡೆದಿವೆ.