ರಣಜಿ ಟ್ರೋಫಿ: ಕರ್ನಾಟಕದ ಅಜೇಯ ಓಟಕ್ಕೆ ಸೌರಾಷ್ಟ್ರ ಬ್ರೇಕ್

Update: 2016-12-02 17:26 GMT

ಪಟಿಯಾಲ, ಡಿ.2: ಈ ವರ್ಷದ ರಣಜಿ ಟ್ರೋಫಿಯಲ್ಲಿ ಅಜೇಯ ದಾಖಲೆಯಿಂದ ಬೀಗುತ್ತಿದ್ದ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ತಂಡ ಶಾಕ್ ನೀಡಿದೆ.

‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿರುವ ಸೌರಾಷ್ಟ್ರ ತಂಡ ಶುಕ್ರವಾರ ಇಲ್ಲಿ ನಡೆದ ಕೊನೆಯ ದಿನದಾಟದಲ್ಲಿ ಕರ್ನಾಟಕವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿ ಈ ವರ್ಷ ಮೊದಲ ಜಯ ದಾಖಲಿಸಿದೆ. ಅಂಕಪಟ್ಟಿಯಲ್ಲಿ 2 ಸ್ಥಾನ ಭಡ್ತಿ ಪಡೆದು 7ನೆ ಸ್ಥಾನಕ್ಕೇರಿದೆ.

ಮೊದಲ ಸ್ಥಾನದಲ್ಲಿದ್ದ ಕರ್ನಾಟಕ ಎರಡನೆ ಸ್ಥಾನಕ್ಕೆ ಕುಸಿದಿದೆ. ಕರ್ನಾಟಕ 7ನೆ ಪಂದ್ಯದಲ್ಲಿ ಮೊದಲ ಸೋಲು ಕಂಡಿದ್ದು, 4ರಲ್ಲಿ ಜಯ ಹಾಗೂ 2ರಲ್ಲಿ ಸೋತಿದೆ. ಒಟ್ಟು 30 ಅಂಕ ಗಳಿಸಿದೆ.

ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ಕರ್ನಾಟಕದ ಆಫ್-ಸ್ಪಿನ್ನರ್ ಕೆ. ಗೌತಮ್ ಸೌರಾಷ್ಟ್ರಕ್ಕೆ ನಡುಕ ಹುಟ್ಟಿಸಿದ್ದರು. ಆದರೆ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

  ಗೆಲ್ಲಲು 58 ರನ್ ಗುರಿ ಪಡೆದ ಸೌರಾಷ್ಟ್ರ ಒಂದು ಹಂತದಲ್ಲಿ 36 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು. ಆಗ ಏಳನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 22 ರನ್ ಸೇರಿಸಿದ ಮೊದಲ ಇನಿಂಗ್ಸ್‌ನ ಶತಕ ವೀರ ಪ್ರೇರಕ್ ಮಂಕಡ್(14) ಹಾಗೂ ಅರ್ಪಿತ್ ವಸವಾಡ(8) 18.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಲು ನೆರವಾದರು.

ನಾಯಕ ವಿನಯ್ ಕುಮಾರ್ ಕೇವಲ 2 ಓವರ್ ಬೌಲಿಂಗ್ ಮಾಡಿದ ಬಳಿಕ ಸ್ಪಿನ್ನರ್‌ಗಳಿಗೆ ಹೆಚ್ಚು ಅವಕಾಶ ನೀಡಿದರು. ಸ್ಪಿನ್ನರ್‌ಗಳಾದ ಗೌತಮ್ ಹಾಗೂ ಅಬ್ರಾರ್ ಖಾಝಿ(2-8) ತಂಡಕ್ಕೆ ಗೆಲುವು ತಂದುಕೊಡಲು ಯತ್ನಿಸಿದರು. ಆದರೆ, ಕೇವಲ 58 ರನ್ ಗುರಿ ನೀಡಿದ್ದ ಕರ್ನಾಟಕ ತಂಡಕ್ಕೆ ಗೆಲುವು ಮರೀಚಿಕೆಯಾಗಿತ್ತು.

 ಕರ್ನಾಟಕ 216: ಇದಕ್ಕೆ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 168 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ 216 ರನ್‌ಗೆ ಆಲೌಟಾಯಿತು.

ಕೊನೆಯ 5 ವಿಕೆಟ್ ನೆರವಿನಿಂದ ಕೇವಲ 48 ರನ್ ಗಳಿಸಲಷ್ಟೇ ಶಕ್ತವಾಯಿತು. ಎಡಗೈ ಸ್ಪಿನ್ನರ್ ಜೈ ಚೌಹಾಣ್(4-71) ಮತ್ತೊಮ್ಮೆ ಕರ್ನಾಟಕವನ್ನು ಕಾಡಿದರು. ಚೌಹಾಣ್ ತನ್ನ ಚೊಚ್ಚಲ ಪಂದ್ಯದಲ್ಲಿ ಒಟ್ಟು 7 ವಿಕೆಟ್‌ಗಳನ್ನು ಉರುಳಿಸಿದರು.

ಕೆ. ಅಬ್ಬಾಸ್ 74 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. 30 ರನ್ ಗಳಿಸಿದ ಎಸ್.ಗೋಪಾಲ್ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಸೌರಾಷ್ಟ್ರದ ಪರ ಜೈ ಚೌಹಾಣ್(4-71), ಕಮಲೇಶ್ ಮಕ್ವಾನ(3-56) ಹಾಗೂ ಉನದ್ಕಟ್(2-29) ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ ಪ್ರಥಮ ಇನಿಂಗ್ಸ್: 200

ಕರ್ನಾಟಕ ದ್ವಿತೀಯ ಇನಿಂಗ್ಸ್: 216

(ಕೆ. ಅಬ್ಬಾಸ್ 74, ಮನೀಷ್ ಪಾಂಡೆ 58, ಗೋಪಾಲ್ 30, ಮಕ್ವಾನ 3-56, ಚೌಹಾಣ್ 4-71, ಉನದ್ಕಟ್ 2-29)

ಸೌರಾಷ್ಟ್ರ ಪ್ರಥಮ ಇನಿಂಗ್ಸ್: 359

ಸೌರಾಷ್ಟ್ರ ದ್ವಿತೀಯ ಇನಿಂಗ್ಸ್: 18.4 ಓವರ್‌ಗಳಲ್ಲಿ 58/6

(ಮಂಕಡ್ ಅಜೇಯ 14, ಜೈ ಚೌಹಾಣ್ 11, ಗೌತಮ್ 4-14, ಖಾಝಿ 2-21)

 ಮಧ್ಯಪ್ರದೇಶಕ್ಕೆ ಬರೋಡಾದ ವಿರುದ್ಧ ಭರ್ಜರಿ ಜಯ

ಧರ್ಮಶಾಲಾ, ಡಿ.2: ಮಧ್ಯಪ್ರದೇಶ ತಂಡ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದ ನಾಲ್ಕನೆ ದಿನದಾಟದಲ್ಲಿ ಎರಡೇ ಎಸೆತದಲ್ಲಿ ಬರೋಡಾದ ವಿರುದ್ಧ ಭರ್ಜರಿ ಜಯ ದಾಖಲಿಸಿತು.

ಮಧ್ಯಪ್ರದೇಶಕ್ಕೆ ನಾಲ್ಕನೆ ದಿನವಾದ ಶುಕ್ರವಾರ ಗೆಲುವಿಗೆ 1 ವಿಕೆಟ್‌ಗಳ ಅಗತ್ಯವಿತ್ತು. ಕೇವಲ ಎರಡೇ ಎಸೆತದಲ್ಲಿ ಬರೋಡಾದ ಬ್ಯಾಟ್ಸ್‌ಮನ್‌ನನ್ನು ಪೆವಿಲಿಯನ್‌ಗೆ ಕಳುಹಿಸಿದ ಮಧ್ಯಪ್ರದೇಶ 232 ರನ್‌ಗಳ ಅಂತರದಿಂದ ಜಯ ಸಾಧಿಸಿತು.

ಸಾಗರ್ ಮಂಗಲೊರ್ಕರ್‌ರನ್ನು ಕ್ಲೀನ್ ಬೌಲ್ಡ್ ಮಾಡಿದ ವೇಗದ ಬೌಲರ್ ಚಂದ್ರಕಾಂತ್ ಸಾಕುರೆ ಐದು ವಿಕೆಟ್ ಗೊಂಚಲು ಪಡೆದರು. 8 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಸಾಗರ್ ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೇ ಔಟಾದರು.

ಎಚ್‌ಪಿಸಿಎ ಸ್ಟೇಡಿಯಂನಲ್ಲಿ ಗೆಲುವಿಗೆ 347 ರನ್ ಸವಾಲು ಪಡೆದಿದ್ದ ಬರೋಡಾ 114 ರನ್‌ಗೆ ಸರ್ವಪತನಗೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 53 ರನ್ ಮುನ್ನಡೆ ಪಡೆದಿದ್ದ ಮ.ಪ್ರದೇಶ ಒಟ್ಟು ಆರು ಅಂಕ ಗಳಿಸಿತು.

ಗುರುವಾರ 3ನೆ ದಿನದಾಟದಲ್ಲಿ ಬರೋಡಾ 2ನೆ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದು 95 ರನ್‌ಗೆ 9 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ವಿಕೆಟ್‌ನಲ್ಲಿ ಜೊತೆಯಾಟ ನಡೆಸಿದ ಸಾಗರ್ ಹಾಗೂ ಪಠಾಣ್ ತಂಡ 3ನೆ ದಿನದಾಟದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಲು ನೆರವಾದರು.

ಐದು ಕ್ವಾರ್ಟರ್‌ಫೈನಲ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ

9ನೆ ಹಾಗೂ ಅಂತಿಮ ಸುತ್ತಿನ ರಣಜಿ ಟ್ರೋಫಿ ಪಂದ್ಯಗಳು ಡಿ.7 ರಿಂದ ಆರಂಭವಾಗುತ್ತದೆ. ಇನ್ನೂ ಒಂದು ಸುತ್ತಿನ ಪಂದ್ಯ ಬಾಕಿ ಇರುವಾಗಲೇ ಹಾಲಿ ಚಾಂಪಿಯನ್ ಮುಂಬೈ, ಕರ್ನಾಟಕ ಹಾಗೂ ಜಾರ್ಖಂಡ್ ತಂಡಗಳು ಕ್ವಾರ್ಟರ್ ಫೈನಲ್ ಸ್ಥಾನ ದೃಢಪಡಿಸಿವೆ. ಇನ್ನುಳಿದ ಐದು ಕ್ವಾರ್ಟರ್ ಫೈನಲ್ ಸ್ಥಾನಕ್ಕಾಗಿ ಪೈಪೋಟಿ ಕಂಡುಬಂದಿದೆ.

ಒಂದು ವೇಳೆ ತಂಡಗಳು ಗ್ರೂಪ್‌ನಲ್ಲಿ ಅಂಕ ಗಳಿಕೆಯಲ್ಲಿ ಸಮಬಲ ಸಾಧಿಸಿದರೆ ಹೆಚ್ಚು ಪಂದ್ಯ ಗೆದ್ದ ತಂಡ ಮುಂದಿನ ಸುತ್ತಿಗೇರಲಿದೆ. ಗರಿಷ್ಠ ಪಂದ್ಯಗಳ ಗೆಲುವಿನಲ್ಲೂ ಸಮಬಲ ಕಂಡುಬಂದರೆ ಉತ್ತಮ ರನ್‌ರೇಟ್ ಇರುವ ತಂಡ ಮುಂದಿನ ಸುತ್ತಿಗೆ ತೇರ್ಗಡೆಯಾಗುತ್ತದೆ. ಕ್ವಾರ್ಟರ್ ಫೈನಲ್ ಪಂದ್ಯಗಳು ಡಿ.24 ರಿಂದ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News