ಕಾಣೆಯಾದ ಸಿಬ್ಬಂದಿಯ ಕುಟುಂಬಗಳಿಂದ ನಿರಾಕ್ಷೇಪ ಪತ್ರಕ್ಕಾಗಿ ಕಾಯುತ್ತಿರುವ ನೌಕಾಪಡೆ
Update: 2016-12-03 18:48 IST
ವಿಶಾಖಪಟ್ಟಣ, ಡಿ.3: ಕಾಣೆಯಾಗಿರುವ ಐಎಫ್‌ನ ಎಎನ್-32 ವಿಮಾನದಲ್ಲಿದ್ದ ಇಲ್ಲಿನ ನೌಕಾಪಡೆಯ ಶಸ್ತ್ರಾಸ್ತ್ರ ಕೋಠಿಯ ನಾಗರಿಕ ನೌಕರರಿಗೆ ಮರಣೋತ್ತರ ಸೌಲಭ್ಯವನ್ನು ಘೋಷಿಸಲು ಅವರ ಕುಟುಂಬಿಕರಿಂದ ನಿರಾಕ್ಷೇಪ ಪತ್ರವನ್ನು ನೌಕಾಪಡೆಯ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ.
ಎನ್‌ಎಡಿಯ 8 ನೌಕರರು ಸೇರಿದಂತೆ 29 ಸಿಬ್ಬಂದಿಯಿದ್ದ ವಿಮಾನವು ಜು.22ರಂದು ಚೆನ್ನೈ ಕರಾವಳಿಯಲ್ಲಿ ಕಾಣೆಯಾಗಿತ್ತು. ಭಾರೀ ಶೋಧ ಕಾರ್ಯಾಚರಣೆಯ ಬಳಿಕ ಐಎಎಫ್ ಸೆ.14ರಂದು ಶೋಧ ಮುಕ್ತಾಯವನ್ನು ಘೋಷಿಸಿತ್ತು.
ಐಎನ್‌ಎಸ್ ಶಕ್ತಿ ನೌಕೆಯಲ್ಲಿಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪೂರ್ವ ನೇವಲ್ ಕಮಾಂಡ್‌ನ ಪ್ರಧಾನ ಫ್ಲಾಗ್ ಅಧಿಕಾರಿ ವೈಸ್ ಎಡ್ಮಿರಲ್ ಎಚ್.ಸಿ.ಎಸ್.ಬಿಶ್ತ್, ಕಾಣೆಯಾಗಿರುವ 6 ಮಂದಿ ಸಿಬ್ಬಂದಿಯ ಕುಟುಂಬಿಕರು ನಿರಾಕ್ಷೇಪ ಪತ್ರ ನೀಡಿದ್ದಾರೆ. ಆದರೆ, ಉಳಿದಿಬ್ಬರ ಹೆತ್ತವರು, ತಮ್ಮ ಮಕ್ಕಳು ಜೀವಂತವಿರಬಹುದೆಂಬ ಆಸೆಯಿಂದ ‘ಮೃತರೆಂದು ಪರಿಭಾವಿಸಲಾಗಿದೆ’ ಘೋಷಣೆಗೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದರು.