ಪಾಕ್ ಜೈಲಿನಲ್ಲಿರುವ ಮಗನಿಗೆ ನ್ಯಾಯಕ್ಕಾಗಿ ಹೆತ್ತವರ ಹೋರಾಟ
ಅಮೃತಸರ, ಡಿ.3: ಬಂಧನಾವಧಿ ಮುಗಿದಿದ್ದರೂ ಪಾಕಿಸ್ತಾನದ ಕಾರಾಗೃಹವೊಂದರಲ್ಲಿರುವ ತಮ್ಮ ಪುತ್ರನನ್ನು ಬಿಡುಗಡೆಗೊಳಿಸಿ ನ್ಯಾಯ ಒದಗಿಸುವಂತೆ ಮುಂಬೈಯ ವೃದ್ಧ ದಂಪತಿಯೊಂದು ಭಾರತಕ್ಕೆ ಭೇಟಿ ನೀಡಲಿರುವ, ಪಾಕ್ ಪ್ರಧಾನಿಯ ವಿದೇಶಾಂಗ ಸಲಹೆಗಾರ ಸರ್ತಾಜ್ ಅಝೀಝ್‌ರನ್ನು ಕೋರಲು ನಿರ್ಧರಿಸಿದ್ದಾರೆ.
ನಾಳೆ ನಡೆಯಲಿರುವ ಹಾರ್ಟ್ ಆಫ್ ಏಶ್ಯ-ಇಸ್ತಾಂಬುಲ್ ಪ್ರೊಸೆಸ್ ಸಚಿವರ ಸಭೆಗಾಗಿ ಸರ್ತಾಜ್ ಆಗಮಿಸಲಿರುವ ಪಾಕಿಸ್ತಾನ ಗಡಿಯ ಈ ಪವಿತ್ರ ನಗರದಲ್ಲಿ ದಂಪತಿ ಕಾಯುತ್ತಿದ್ದಾರೆ.
14 ದೇಶಗಳ 40ಕ್ಕೂ ಹೆಚ್ಚು ವಿದೇಶಾಂಗ ಸಚಿವರು ಹಾಗೂ ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಸಹ ಅದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಪೇಶಾವರದ ಕಾರಾಗೃಹವೊಂದರಲ್ಲಿ ಬಂದಿಯಾಗಿರುವ ತಮ್ಮ ಮಗನಿಗೆ ನ್ಯಾಯ ಪಡೆಯುವುದಕ್ಕಾಗಿ ತಾವಿಲ್ಲಿಗೆ ಬಂದಿದ್ದೇವೆಂದು 32ರ ಹರೆಯದ ಹಾಮಿದ್ ಅನ್ಸಾರಿ ಎಂಬಾತನ ತಾಯಿ ಫೌಝಿಯಾ ಅನ್ಸಾರಿ ತಿಳಿಸಿದ್ದಾರೆ.
ಹಾಮಿದ್‌ಗೆ 3 ವರ್ಷಗಳ ಜೈಲು ಶಿಕ್ಷೆಯಾಗಿದ್ದು, ಕಳೆದ ವರ್ಷವೇ ಅದು ಮುಗಿದಿದೆಯೆಂದು ಹಾಮಿದ್ ಸಹಿತ ಇಬ್ಬರು ಮಕ್ಕಳಿರುವ ದಂಪತಿ ಹೇಳಿದ್ದಾರೆ.