ಕಾಳಧನ ಉತ್ಪತ್ತಿ ತಡೆಯಲು ಸ್ಪಷ್ಟ ಕಾನೂನು ಅಗತ್ಯ: ಅರವಿಂದ್ ಪಣಗರಿಯ

Update: 2016-12-04 13:44 GMT

ಮುಂಬೈ, ಡಿ.3: ದೇಶದಲ್ಲಿರುವ ತೆರಿಗೆ ವಿಧಿಸುವ ಕಾನೂನುಗಳನ್ನು ಕೆಟ್ಟದಾಗಿ ವ್ಯಾಖ್ಯಾನಿಸಲಾಗಿದ್ದು ಈ ಕಾನೂನುಗಳಲ್ಲಿರುವ ಸಂದಿಗ್ಧತೆ ನಿವಾರಿಸಬೇಕಿದೆ. ತೆರಿಗೆ ಪಾವತಿಯ ಮೊತ್ತವನ್ನು ಅಧಿಕಾರಿಗಳ ಸ್ವವಿವೇಚನೆಗೆ ಬಿಡುವ ಬದಲು ಕಾನೂನಿನಲ್ಲೇ ಸ್ಪಷ್ಟವಾಗಿ ತಿಳಿಸಬೇಕು ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪಣಗರಿಯ ಹೇಳಿದ್ದಾರೆ.

ಕಾಳಧನವನ್ನು ಹತ್ತಿಕ್ಕಲು ತೆರಿಗೆ ಪದ್ದತಿಯ ಸುಧಾರಣೆ ಅಗತ್ಯವಾಗಿದೆ. ತೆರಿಗೆ ಕಾನೂನು ಮತ್ತು ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಪ್ರಸ್ತುತ ಇರುವ ಕಾನೂನಿನಲ್ಲಿರು ವ ಹಲವಾರು ವಿನಾಯತಿಗಳನ್ನು ಕಡಿತಗೊಳಿಸುವ ಅಥವಾ ರದ್ದುಗೊಳಿಸುವ ಮೂಲಕ ಕಾನೂನನ್ನು ಸರಳಗೊಳಿಸಬೇಕಾಗಿದೆ ಎಂದವರು ನುಡಿದರು. ಸ್ಟಾಂಪ್ ಶುಲ್ಕದಲ್ಲಿ ಕಡಿತ ಮಾಡುವ ಮೂಲಕ ಕಾಳಧನ ಉತ್ಪತ್ತಿಯನ್ನು ತಡೆಗಟ್ಟಲು ಸಾಧ್ಯ. ಸ್ಟಾಂಪ್ ಶುಲ್ಕ ಅಧಿಕವಾದಷ್ಟು ‘ ಮೇಜಿನ ಕೆಳಗಿನ ವ್ಯವಹಾರ ’ಕ್ಕೆ (ಲಂಚ) ಆಸ್ಪದ ನೀಡಿದಂತಾಗುತ್ತದೆ. ನಾವು ಸ್ವಲ್ಪ ಹಿಂದಿರುಗಿ ನೋಡಬೇಕು. ಈಗಿರುವ ತೆರಿಗೆ ಕಾನೂನುಗಳ ಅಗತ್ಯವಿದೆಯೇ, ಇವನ್ನು ಇನ್ನಷ್ಟು ನಿಖರ, ಸ್ಪಷ್ಟಗೊಳಿಸಲು ಸಾಧ್ಯವಿಲ್ಲವೇ ಎಂಬುದನ್ನು ನಿರ್ಧರಿಸಬೇಕಿದೆ. ತೆರಿಗೆ ಪಾವತಿಯ ಮೊತ್ತವನ್ನು ತೆರಿಗೆ ಅಧಿಕಾರಿ ನಿರ್ಧರಿಸುವ ಬದಲು, ಎಷ್ಟು ತೆರಿಗೆ ಪಾವತಿಸಬೇಕು ಎಂಬುದು ಕಾನೂನಿನಲ್ಲೇ ಸ್ಪಷ್ಟವಾಗಿ ತಿಳಿಯುವಂತಿರಬೇಕು ಎಂದವರು ಅಭಿಪ್ರಾಯಪಟ್ಟರು.

ಅಧಿಕ ವೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿರುವ ಕ್ರಮ ಕಾಳಧನ ಹತ್ತಿಕ್ಕುವ ನಿಟ್ಟಿನಲ್ಲಿನ ಒಂದು ಹೆಜ್ಜೆಯಾಗಿದೆ. ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News