ಮುಂಬೈ ಕುಟುಂಬದಿಂದ 2ಲ.ಕೋ.ರೂ.ಗಳ ಕಪ್ಪುಹಣ ಘೋಷಣೆ: ಸರಕಾರದಿಂದ ತನಿಖೆ

Update: 2016-12-04 13:55 GMT

ಮುಂಬೈ,ಡಿ.4: ಮುಂಬೈನ ಕುಟುಂಬವೊಂದರಿಂದ ಎರಡು ಲಕ್ಷ ಕೋಟಿ ರೂ.ಗಳ ಕಪ್ಪುಹಣ ಘೋಷಣೆಯನ್ನು ತಿರಸ್ಕರಿಸಲಾಗಿದ್ದು, ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಕೇಂದ್ರ ವಿತ್ತ ಸಚಿವಾಲಯವು ತಿಳಿಸಿದೆ. ಸಣ್ಣಪುಟ್ಟ ಉದ್ಯೋಗಗಳಲ್ಲಿರುವ ವ್ಯಕ್ತಿಗಳು ಸಲ್ಲಿಸಿರುವ ಘೋಷಣೆ ಶಂಕಾಸ್ಪದವಾಗಿರುವುದರಿಂದ ಅದನ್ನು ತಿರಸ್ಕರಿಸಲಾಗಿದೆ ಎಂದು ಸಚಿವಾಲಯವು ಹೇಳಿದೆ.

ಅಬ್ದುಲ್ ರಝಾಕ್ ಮುಹಮ್ಮದ್ ಸೈಯದ್, ಆತನ ಪುತ್ರ ಮುಹಮ್ಮದ್ ಆರಿಫ್ ಅಬ್ದುಲ್ ರಝಾಕ್ ಸೈಯದ್, ಪತ್ನಿ ರುಕ್ಸಾನಾ ಅಬ್ದುಲ್ ರಝಾಕ್ ಸೈಯದ್ ಮತ್ತು ಸೋದರಿ ನೂರ್‌ಜಹಾನ್ ಮುಹಮ್ಮದ್ ಸೈಯದ್ ಅವರ ಈ ಕುಟುಂಬವು ಬಾಂದ್ರಾದಲ್ಲಿ ವಾಸವಾಗಿದೆ.

ಈ ವರ್ಷದ ಮುಂಗಡಪತ್ರದಲ್ಲಿ ಪ್ರಕಟಿಸಿದ್ದ ಕಪ್ಪುಹಣ ಬಹಿರಂಗ ಯೋಜನೆಯಡಿ ಈ ಕುಟುಂಬವು 2 ಲ.ಕೋ.ರೂ. ಕಪ್ಪುಹಣವನ್ನು ಘೋಷಿಸಿತ್ತು. ಸೆ.30ಕ್ಕೆ ಅಂತ್ಯಗೊಂಡ ಯೋಜನೆಯಡಿ 66,250 ಕೋ.ರೂ. ಕಪ್ಪುಹಣ ಘೋಷಣೆಯಾಗಿತ್ತು. ಸೈಯದ್ ಕುಟುಂಬವು ಘೋಷಿಸಿದ ಕಪ್ಪುಹಣದ ಮೊತ್ತ ಇದರ ಮೂರು ಪಟ್ಟಿನಷ್ಟಿದೆ.

ಸೈಯದ್ ಕುಟುಂಬದ ನಾಲ್ಕು ಪಾನ್ ಸಂಖ್ಯೆಗಳಲ್ಲಿ ಮೂರು ಮೂಲತಃ ಅಜ್ಮೀರ್‌ದ್ದಾಗಿವೆ. ಇವರು 2016ರ ಸೆಪ್ಟೆಂಬರ್‌ನಲ್ಲಿ ಮುಂಬೈಗೆ ವಲಸೆ ಬಂದಿದ್ದು, ಅದೇ ತಿಂಗಳಲ್ಲಿ ಕಪ್ಪುಹಣವನ್ನು ಘೋಷಿಸಿದ್ದರು ಎಂದೂ ವಿತ್ತ ಸಚಿವಾಲಯವು ತಿಳಿಸಿದೆ.

   ಈ ಸಂದರ್ಭದಲ್ಲಿ ಅಹ್ಮದಾಬಾದ್ ನಿವಾಸಿ,ಸಣ್ಣ ಪ್ರಮಾಣದ ರಿಯಲ್ ಎಸ್ಟೇಟ್ ವ್ಯಾಪಾರಿಯಾಗಿರುವ ಮಹೇಶ್ ಶಾ ಪ್ರಕರಣವನ್ನು ಸಚಿವಾಲಯವು ಉಲ್ಲೇಖಿಸಿದೆ. ಸರಕಾರದ ಯೋಜನೆಯಡಿ 13,000 ಕೋ.ರೂ.ಗಳ ಕಪ್ಪುಹಣ ಘೋಷಿಸಿದ್ದ ಆತ ಕಳೆದ ತಿಂಗಳಿನಿಂದ ನಾಪತ್ತೆಯಾಗಿದ್ದ. ಆತನ ಘೋಷಣೆಯನ್ನೂ ಸರಕಾರವು ತಿರಸ್ಕರಿಸಿದೆ.

ಟಿವಿ ಸ್ಟುಡಿಯೊದಲ್ಲಿ ತನ್ನ ಘೋಷಣೆಯ ಬಗ್ಗೆ ವಿವರಿಸುತ್ತಿದ್ದಾಗಲೇ ಅಧಿಕಾರಿಗಳು ಶಾನನ್ನು ವಶಕ್ಕೆ ತೆಗೆದುಕೊಂಡಿದ್ದರು. ರಾಜಕಾರಣಿಗಳು, ಅಧಿಕಾರಿಗಳು, ಬಿಲ್ಡರ್‌ಗಳು ಸೇರಿದಂತೆ ಹಲವಾರು ಜನರು ತನ್ನಿಂದ ಈ ಘೋಷಣೆಯನ್ನು ಮಾಡಿಸಿದ್ದರು ಎಂದಾತ ತಿಳಿಸಿದ್ದಾನೆ. ಇಂದು ಏಳು ಗಂಟೆಗಳ ಕಾಲ ಶಾನನ್ನು ವಿಚಾರಣೆಗೊಳಡಿಸಿದ ಅಧಿಕಾರಿಗಳು ಅನಾರೋಗ್ಯದ ಕಾರಣದಿಂದ ಮನೆಗೆ ತೆರಳಲು ಅನುಮತಿ ನೀಡಿದರು. ನಾಳೆ ಆತನನ್ನು ಮತ್ತೆ ಪ್ರಶ್ನಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News