×
Ad

ಭಾರತದ ಮಹಿಳಾ ತಂಡಕ್ಕೆ ಸತತ ಆರನೆ ಪ್ರಶಸ್ತಿ

Update: 2016-12-04 23:33 IST

ಬ್ಯಾಂಕಾಂಗ್, ಡಿ.4: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿರುವ ಭಾರತದ ಮಹಿಳಾ ಕ್ರಿಕೆಟ್ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ರವಿವಾರ ಇಲ್ಲಿ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 17 ರನ್‌ಗಳ ಅಂತರದಿಂದ ಮಣಿಸಿರುವ ಭಾರತ ಸತತ ಆರನೆ ಬಾರಿ ಟ್ರೋಫಿಯನ್ನು ಎತ್ತಿ ಹಿಡಿಯಿತು. ಭಾರತ ಈ ವರೆಗೆ ನಡೆದ ಎಲ್ಲ ಆರೂ ಟೂರ್ನಿಯನ್ನು ಗೆದ್ದುಕೊಂಡು ಮಹತ್ತರ ಸಾಧನೆ ಮಾಡಿದೆ.

ಭಾರತ ಏಷ್ಯಾಕಪ್ ಫೈನಲ್‌ನಲ್ಲಿ ಸತತ ಎರಡನೆ ಬಾರಿ ಪಾಕಿಸ್ತಾನವನ್ನು ಮಣಿಸಿದೆ. 2012-13ರಲ್ಲಿ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು.

ಟೂರ್ನಮೆಂಟ್‌ನ ಆರಂಭಕ್ಕೆ ಮೊದಲು ಟ್ವೆಂಟಿ-20 ನಾಯಕತ್ವದಿಂದ ಕೆಳಗಿಳಿಸಲ್ಪಟ್ಟಿದ್ದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಮಿಥಾಲಿ ಅಜೇಯ 73 ರನ್ ಗಳಿಸಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಲು ನೆರವಾದರು.

 ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ವಿಕೆಟ್‌ಗೆ ಸ್ಮತಿ ಮಂಧಾನರೊಂದಿಗೆ 24 ರನ್ ಜೊತೆಯಾಟ ನಡೆಸಿದ ಮಿಥಾಲಿ ಅವರು ಎಸ್. ಮೇಘನಾ(9) ಅವರೊಂದಿಗೆ 2ನೆ ವಿಕೆಟ್‌ಗೆ 44 ರನ್ ಸೇರಿಸಿದರು.

ವೇದಾ ಕೃಷ್ಣಮೂರ್ತಿ(2) ಹಾಗೂ ಹರ್ಮನ್‌ಪ್ರೀತ್ ಕೌರ್(5) ಒಂದಕೆ ಸ್ಕೋರ್ ಗಳಿಸಿ ಔಟಾದರು. ಜುಲಾನ್ ಗೋಸ್ವಾಮಿ 10 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್‌ಗಳ ಸಹಿತ 17 ರನ್ ಕಲೆ ಹಾಕಿ ಗಮನ ಸೆಳೆದರು.

ಪಾಕಿಸ್ತಾನದ ಪರವಾಗಿ ಎಡಗೈ ಸ್ಪಿನ್ನರ್ ಆನಮ್ ಅಮೀನ್(2-24) ಯಶಸ್ವಿ ಬೌಲರ್ ಎನಿಸಿಕೊಂಡರು.

ಭಾರತೀಯ ಆಟಗಾರ್ತಿಯರು ಅತ್ಯುತ್ತಮ ಬೌಲಿಂಗ್ ಸಂಘಟಿಸಿ ಪಾಕ್ ತಂಡವನ್ನು 6 ವಿಕೆಟ್ ನಷ್ಟಕ್ಕೆ 104 ರನ್‌ಗೆ ನಿಯಂತ್ರಿಸಿ 17 ರನ್‌ಗಳ ಅಂತರದಿಂದ ಗೆಲುವು ತಂದುಕೊಟ್ಟರು. ಎಡಗೈ ಸ್ಪಿನ್ನರ್ ಏಕ್ತಾ ಬಿಷ್ಟ್ ಮತ್ತೊಮ್ಮೆ ಬೌಲಿಂಗ್‌ನಲ್ಲಿ ಮಿಂಚಿದರು. ಬಿಷ್ಟ್ ನಾಲ್ಕು ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಉರುಳಿಸಿದರು.

ಪ್ರಸ್ತುತ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸತತ ಎರಡನೆ ಬಾರಿ ಸೋಲಿಸಿದೆ. ಲೀಗ್ ಹಂತದಲ್ಲಿ 5 ವಿಕೆಟ್‌ಗಳ ಅಂತರದಿಂದ ಪಾಕ್‌ನ್ನು ಮಣಿಸಿತ್ತು. ಈ ಗೆಲುವಿನ ಮೂಲಕ ಭಾರತ ಟೂರ್ನಿಯಲ್ಲಿ ಸತತ ಆರನೆ ಪಂದ್ಯವನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದೆ.

ಮಾರ್ಚ್‌ನಲ್ಲಿ ಸ್ವದೇಶದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಶರಣಾಗಿದ್ದ ಭಾರತ ಇದೀಗ ತಕ್ಕ ಸೇಡು ತೀರಿಸಿಕೊಂಡಿದೆ.

 2004ರಲ್ಲಿ ಆರಂಭವಾದ ಟೂರ್ನಿಯ ಆರಂಭದ ನಾಲ್ಕು ಆವೃತ್ತಿಯ ಟೂರ್ನಿಯು 50 ಓವರ್‌ಗಳ ಪಂದ್ಯವಾಗಿತ್ತು. ಆ ನಂತರ ನಡೆದ ಎರಡು ಟೂರ್ನಿ ಟ್ವೆಂಟಿ-20 ಮಾದರಿಯದ್ದಾಗಿದೆ. 2012ರಲ್ಲಿ ಗ್ವಾಂಗ್‌ಝೌನಲ್ಲಿ ನಡೆದ ಕಳೆದ ಆವೃತ್ತಿಯ ಏಷ್ಯಾಕಪ್‌ನ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿರುವ ಭಾರತ ಟ್ರೋಫಿಯನ್ನು ಜಯಿಸಿತ್ತು.

ಮಿಥಾಲಿ ರಾಜ್ ಹಾಗೂ ಏಕ್ತಾ ಬಿಷ್ಟ್ ಸಾಹಸದ ನೆರವಿನಿಂದ ಭಾರತ ಶ್ರೇಷ್ಠ ಪ್ರದರ್ಶನವನ್ನು ಪುನರಾವರ್ತಿಸಿದೆ. ಒಟ್ಟು 220 ರನ್ ಗಳಿಸಿರುವ ರಾಜ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. 6 ಇನಿಂಗ್ಸ್‌ಗಳಲ್ಲಿ 128 ರನ್ ಗಳಿಸಿರುವ ಜವೇರಿಯಾ ಖಾನ್ ಎರಡನೆ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನ ವಿರುದ್ಧ ಎರಡೂ ಹೈವೋಲ್ಟೇಜ್ ಪಂದ್ಯಗಳಲ್ಲಿ ಮಿಥಾಲಿ ರಾಜ್ ತಂಡಕ್ಕೆ ಆಸರೆಯಾಗಿದ್ದರು. ಫೈನಲ್‌ನಲ್ಲಿ ಅಜೇಯ 73 ರನ್ ಗಳಿಸಿರುವ ಮಿಥಾಲಿ ಟೂರ್ನಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. 112 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಮಿಥಾಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ದಾಖಲಿಸಿದ್ದರು.

 ಪಾಕಿಸ್ತಾನ ವಿರುದ್ಧ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸೋಲುಂಡಿತ್ತು. ಮಿಥಾಲಿ ಮಂದಗತಿಯ ಬ್ಯಾಟಿಂಗ್ ಟೀಕೆಗೆ ಗುರಿಯಾಗಿತ್ತು. ಇದೀಗ ತನ್ನ ತಪ್ಪನ್ನು ಮಿಥಾಲಿ ತಿದ್ದುಕೊಂಡರು.

ಉತ್ತಮ ಪ್ರದರ್ಶನ ನೀಡಿರುವ 34ರ ಹರೆಯದ ಮಿಥಾಲಿ ತಾನೂ ಈಗಲೂ ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ.

 ಮಿಥಾಲಿ ಬದಲಿಗೆ ಟ್ವೆಂಟಿ-20 ನಾಯಕತ್ವವಹಿಸಿಕೊಂಡಿದ್ದ ಆಲ್‌ರೌಂಡರ್ ಹರ್ಮನ್‌ಪ್ರೀತ್ ಕೌರ್ ಟೂರ್ನಿಯಲ್ಲಿ ತನ್ನ ಸಾಮರ್ಥ್ಯದಷ್ಟು ಪ್ರದರ್ಶನ ನೀಡಲಿಲ್ಲ. ಅವರು ಟೂರ್ನಿಯಲ್ಲಿ ಆಡಿರುವ ಏಳು ಇನಿಂಗ್ಸ್‌ನಲ್ಲಿ 30ಕ್ಕೂ ಅಧಿಕ ರನ್ ಗಳಿಸಲು ವಿಫಲರಾದರು. ಕೇವಲ 2 ವಿಕೆಟ್‌ಗಳನ್ನು ಪಡೆದರು.

ಎಡಗೈ ಸ್ಪಿನ್ ಬೌಲರ್ ಬಿಷ್ಟ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿ ತಂಡದ ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ಭಾರತದ ಮಹಿಳಾ ತಂಡ:

20 ಓವರ್‌ಗಳಲ್ಲಿ 121/5

(ಮಿಥಾಲಿ ರಾಜ್ ಅಜೇಯ 73, ಗೋಸ್ವಾಮಿ 17, ಅನಾಮ್ ಅಮಿನ್ 2-24)

ಪಾಕಿಸ್ತಾನ ಮಹಿಳಾ ತಂಡ:

20 ಓವರ್‌ಗಳಲ್ಲಿ 104/6

( ಬಿಸ್ಮಾ ಮರೂಫ್ 25, ಜಾವೇರಿಯ ಖಾನ್ 22, ಆಯೇಷಾ ಜಾಫರ್ 15, ಬಿಷ್ಟ್ 2-22, ಅನುಜಾ ಪಾಟೀಲ್ 1-18, ಜುಲಾನ್ ಗೋಸ್ವಾಮಿ 1-19, ಶಿಖಾ ಪಾಂಡೆ 1-17, ಪ್ರೀತಿ ಬೋಸ್ 1-18)

ಪಂದ್ಯಶ್ರೇಷ್ಠ: ಮಿಥಾಲಿ ರಾಜ್

ಸರಣಿಶ್ರೇಷ್ಠ: ಮಿಥಾಲಿ ರಾಜ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News