×
Ad

ಮೊದಲ ಏಕದಿನ : ಆಸ್ಟ್ರೇಲಿಯಕ್ಕೆ ಕಿವೀಸ್ ವಿರುದ್ಧ 68 ರನ್‌ಗಳ ಜಯ

Update: 2016-12-04 23:41 IST

 ಸಿಡ್ನಿ, ಡಿ.4: ಇಲ್ಲಿ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ರವಿವಾರ ನ್ಯೂಝಿಲೆಂಡ್ ವಿರುದ್ಧ ಆಸ್ಟ್ರೇಲಿಯ 68 ರನ್‌ಗಳ ಜಯ ಗಳಿಸಿದೆ.
 ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 325 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ತಂಡ 44.2 ಓವರ್‌ಗಳಲ್ಲಿ 256 ರನ್‌ಗಳಿಗೆ ಆಲೌಟಾಗಿದೆ.
ಈ ಬೇಸಗೆಯಲ್ಲಿ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಮೊದಲ ಬಾರಿ ದೃಢ ಹೆಜ್ಜೆ ಇರಿಸಿದರು. ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಒಂದು ಬಾರಿಯೂ ಟಾಸ್ ಜಯಿಸಿರಲಿಲ್ಲ. ಶತಕ ಸಿಡಿಸಲಿಲ್ಲ. ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ಜಯ ಗಳಿಸಿತ್ತು. ಅಷ್ಟರ ವೇಳೆಗೆ ಸರಣಿ 2-0 ಅಂತರದಲ್ಲಿ ದಕ್ಷಿಣ ಆಫ್ರಿಕದ ಪಾಲಾಗಿತ್ತು.
  ಕ್ರಿಕೆಟ್ ಮಾದರಿ ಬದಲಾಗುತ್ತಿದ್ದಂತೆ ಸ್ಮಿತ್‌ಗೆ ಅದೃಷ್ಟ ಖುಲಾಯಿಸಿದೆ. ಸ್ಮಿತ್ ಟಾಸ್ ಜಯಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಜೀವನ ಶ್ರೇಷ್ಠ ರನ್(164) ದಾಖಲಿಸಿದರು. ಅಪೂರ್ವ ಕ್ಯಾಚ್ ತೆಗೆದುಕೊಂಡರು. ಅವರ ಶ್ರೇಷ್ಠ ಆಟದ ನೆರವಿನಲ್ಲಿ ಆಸ್ಟ್ರೇಲಿಯ ಮೂರು ಪಂದ್ಯಗಳ ಚಾಪೆಲ್-ಹ್ಯಾಡ್ಲಿ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಜಯ ಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಕ್ಕೆ 68 ರನ್‌ಗಳ ಜಯ. ನ್ಯೂಝಿಲೆಂಡ್‌ನ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ ಆಸ್ಟ್ರೇಲಿಯ ವಿರುದ್ಧ ಎಲ್ಲ ಮಾದರಿಯಲ್ಲಿ ಆಡಿದ ಒಟ್ಟು 41 ಪಂದ್ಯಗಳಲ್ಲಿ ಮೊದಲ ಶತಕ ದಾಖಲಿಸಿರುವುದು, ಸ್ಮಿತ್ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಜೀವನಶ್ರೇಷ್ಠ ಗರಿಷ್ಠ ವೈಯಕ್ತಿಕ ಸ್ಕೋರ್ , ಟ್ರಾವಿಡ್ ಹೆಡ್ ಅರ್ಧಶತಕ(52), ಜೋಶ್ ಹೇಝಲ್‌ವುಡ್ 49ಕ್ಕೆ 3 ವಿಕೆಟ್ ಇಂದಿನ ಪಂದ್ಯದ ಪ್ರಮುಖ ಹೈಲೈಟ್ಸ್‌ಗಳಾಗಿವೆ.
 
 ಎಸ್‌ಜಿಯಲ್ಲಿ ಈ ವರೆಗೆ ನಡೆದಿರುವ 153 ಏಕದಿನ ಪಂದ್ಯಗಳಲ್ಲಿ ಯಾರೂ ಕೂಡಾ ಸ್ಮಿತ್ ಗಳಿಸಿದಷ್ಟು ರನ್ ದಾಖಲಿಸಿಲ್ಲ. ಸ್ಮಿತ್ 13ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ವಿಕೆಟ್ ಕೀಪರ್ ಬಿ.ಜೆ.ವಾಟ್ಲಿಂಗ್ ಕ್ಯಾಚ್ ಅವಕಾಶವನ್ನು ಕಳೆದುಕೊಂಡರು. ಅದೇ ಓವರ್‌ನಲ್ಲಿ ಎಲ್‌ಬಿಡಬ್ಲು ಬಲೆಗೆ ಬೀಳುವ ಅವಕಾಶದಿಂದ ಸ್ಮಿತ್ ಪಾರಾದರು. 152 ರನ್ ಗಳಿಸಿದ್ದಾಗ ಅವರಿಗೆ ಇನ್ನೊಂದು ಜೀವದಾನ ಸಿಕ್ಕಿತ್ತು. ಇದು ನ್ಯೂಝಿಲೆಂಡ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿತ್ತು. ಹೆಡ್ 7 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಸ್ಮಿತ್ ಮತ್ತು ಹೆಡ್ 5ನೆ ವಿಕೆಟ್‌ಗೆ 127 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 200ರ ಗಡಿ ದಾಟಿಸಿದ್ದರು.

ಆಸ್ಟ್ರೇಲಿಯ 324/8: ಆಸ್ಟ್ರೇಲಿಯ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಮೊದಲ ಓವರ್‌ನಲ್ಲಿ ಮ್ಯಾಟ್ ಹೆನ್ರಿ ಅವರ 2ನೆ ಎಸೆತದಲ್ಲಿ ಆರಂಭಿಕ ದಾಂಡಿಗ ಆ್ಯರನ್ ಫಿಂಚ್ ಬೌಲ್ಡ್ ಆಗಿ ಸೊನ್ನೆ ಸುತ್ತಿದರು. ಆದರೆ ಫಿಂಚ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಡೇವಿಡ್ ವಾರ್ನರ್ 10 ಓವರ್‌ಗಳು ಮುಗಿಯುವ ತನಕ ಕ್ರೀಸ್‌ನಲ್ಲಿ ಬ್ಯಾಟಿಂಗ್ ನಡೆಸಿದರು. 10ನೆ ಓವರ್‌ನ ಕೊನೆಯ ಎಸೆತದಲ್ಲಿ ಲೂಕಿ ಫರ್ಗ್ಯುಸನ್‌ಗೆ ವಾರ್ನರ್(24) ವಿಕೆಟ್ ಒಪ್ಪಿಸಿದರು. ಇದು ಫರ್ಗ್ಯುಸನ್ ಪಾಲಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಲಭಿಸಿದ ಮೊದಲ ವಿಕೆಟ್ ಆಗಿದೆ. ಬಳಿಕ ಜಾರ್ಜ್ ಬೈಲಿ(17), ಮಿಚೆಲ್ ಮಾರ್ಷ್(1) ಔಟಾಗುವುದರೊಂದಿಗೆ ತಂಡದ ಸ್ಕೋರ್ 20.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 92 ಆಗಿತ್ತು.
ಮ್ಯಾಟ್ ಹೆನ್ರಿ ಅವರು ಹೆಡ್ ಅವರು ನೀಡಿದ ಕ್ಯಾಚ್‌ನ್ನು ತೆಗೆದುಕೊಳ್ಳುತ್ತಿದ್ದರೆ ಆಸ್ಟ್ರೇಲಿಯದ ಸ್ಕೋರ್ 5 ವಿಕೆಟ್ ನಷ್ಟದಲ್ಲಿ 115 ಆಗುತ್ತಿತ್ತು. ಹೆಡ್ ಈ ಅವಕಾಶದ ಸದುಪಯೋಗ ಮಾಡಿದರು. 88 ನಿಮಿಷಗಳ ಬ್ಯಾಟಿಂಗ್‌ನಲ್ಲಿ ಅವರು 5 ಬೌಂಡರಿ ಗಳನ್ನು ಒಳಗೊಂಡ 52 ರನ್ ಗಳಿಸಿ ಬೌಲ್ಟ್‌ಗೆ ರಿಟರ್ನ್ ಕ್ಯಾಚ್ ನೀಡಿ ವಾಪಸಾದರು. ಇದಕ್ಕೂ ಮೊದಲು ಅವರು ಎರಡನೆ ಏಕದಿನ ಅರ್ಧಶತಕ ದಾಖಲಿಸಿದರು. ಹೆಡ್ ಅವರು ಸ್ಮಿತ್‌ಗೆ ಉತ್ತಮ ಬೆಂಬಲ ನೀಡಿದರು.88ನೆ ಏಕದಿನ ಪಂದ್ಯವನ್ನಾಡಿದ ಅವರು 7ನೆ ಶತಕ ದಾಖಲಿಸಿದರು.
  206 ನಿಮಿಷಗಳ ಬ್ಯಾಟಿಂಗ್‌ನಲ್ಲಿ ಸ್ಮಿತ್ 157 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 164 ರನ್ ಗಳಿಸಿದರು. ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ 22 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 38 ರನ್ ಗಳಿಸಿ ಔಟಾದರು. ಆಸ್ಟ್ರೇಲಿಯ ಕೊನೆಯ ಎಂಟು ಓವರ್‌ಗಳಲ್ಲಿ 101 ರನ್ ಸೇರಿಸಿತು.
 ನ್ಯೂಝಿಲೆಂಡ್ 256ಕ್ಕೆ ಆಲೌಟ್: 325 ರನ್‌ಗಳ ಗೆಲುವಿನ ಕಠಿಣ ಸವಾಲು ಪಡೆದ ನ್ಯೂಝಿಲೆಂಡ್ ಅಗ್ರ ಸರದಿಯ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಮೂರನೆ ವಿಕೆಟ್‌ಗೆ ಮಾರ್ಟಿನ್ ಗಪ್ಟಿಲ್ ಮತ್ತು ನೀಶಮ್ 92 ರನ್‌ಗಳ ಜೊತೆಯಾಟ ನೀಡಿ ಸ್ಕೋರ್‌ನ್ನು ನೂರರ ಗಡಿ ದಾಟಿಸಿದರು. ನಿಶಮ್ 34 ರನ್ ಗಳಿಸಿದರು.

ಗಪ್ಟಿಲ್ ಆಸ್ಟ್ರೇಲಿಯದ ದಾಳಿಯನ್ನು ಪುಡಿ ಪುಡಿ ಮಾಡಿದರು.135ನೆ ಏಕದಿನ ಪಂದ್ಯವನ್ನಾಡುತ್ತಿರುವ ಗಪ್ಟಿಲ್ 11ನೆ ಶತಕ ದಾಖಲಿಸಿದರು. 150 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಗಪ್ಟಿಲ್ 102 ಎಸೆತಗಳನ್ನು ಎದುರಿಸಿದರು. 10 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 114 ರನ್ ಗಳಿಸಿ ಝಾಂಪಗೆ ವಿಕೆಟ್ ಒಪ್ಪಿಸಿದರು. ಇದೇ ವೇಳೆ ಗಪ್ಟಿಲ್ ಏಕದಿನ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳನ್ನು ಪೂರೈಸಿದರು. ನಿಶಮ್ (34), ಮುನ್ರೊ (49) ಮ್ಯಾಟ್ ಹೆನ್ರಿ(27) ಎರಡಂಕೆಯ ಸ್ಕೋರ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಆಸ್ಟ್ರೇಲಿಯ 50 ಓವರ್‌ಗಳಲ್ಲಿ 324/8( ಸ್ಮಿತ್ 164, ಹೆಡ್ 52, ವೇಡ್ ಔಟಾಗದೆ 38; ಬೌಲ್ಟ್ 51ಕ್ಕೆ 2, ಹೆನ್ರಿ 74ಕ್ಕೆ 2, ನೀಶಮ್ 58ಕ್ಕೆ 2).
ನ್ಯೂಝಿಲೆಂಡ್ 44.2 ಓವರ್‌ಗಳಲ್ಲಿ ಆಲೌಟ್ 256(ಗಪ್ಟಿಲ್ 114, ಮುನ್ರೊ 49; ಹೇಝಲ್‌ವುಡ್ 49ಕ್ಕೆ3, ಝಾಂಪ 66ಕ್ಕೆ 2, ಕಮಿನ್ಸ್ 62ಕ್ಕೆ 2, ಮಾರ್ಷ್ 38ಕ್ಕೆ 2)
ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News