ಗಾಂಧಿ ಭಾರತ ಸರದಿ ಸಾಲಿನಲ್ಲಿ ನಿಂತಿದೆ
ಮೊನ್ನೆ ರಾಮನಗರದಿಂದ ಬೆಂಗಳೂರಿಗೆ ಬರಬೇಕಾಗಿತ್ತು. ಬಸ್ ನಿಲ್ದಾಣದಲ್ಲಿ ಕಾಲಿಡಲು ಜಾಗವಿರಲಿಲ್ಲ. ರೈಲಿಗೆ ಓಡಿದರೆ ಬಂದ ರೈಲು ಕಿಕ್ಕಿರಿದು ಕಾಲಿಡದಂತಾಗಿತ್ತು. ನಿಂತವನು ‘ಹೇಗಿದೆ ನೋಟುಗಳ ಓಡಾಟ’ವೆಂದೆ. ನಿಂತ ಎಲ್ಲರ ಕೈಕಾಲುಗಳೂ ಲಘುವಾದವು. ಓಹೋ ಇಡೀ ಲೋಕವೇ ಬಾಯಿ ಮೇಲೆ ಬೆರಳಿಟ್ಟು ಬೆರಗಾಗಿದೆ ಬಿಡಿ; 2000 ರೂ. ನೋಟು ಮೊಬೈಲಿನಡಿ ಹಿಡಿದರೆ ಮೋದಿ ಭಾಷಣ ಬರುತ್ತೆ! ದುಡ್ಡನ್ನು ಹಗೇವಿನಲ್ಲಿ ತುಂಬಿರೋರೆಲ್ಲಾ ಸತ್ತರು ಬಿಡಿ; ಕಾಶ್ಮೀರದ ಜನ ಈಗ ಹೆದರಿಕೆಯಿಲ್ಲದೆ ಓಡಾಡಿಕೊಂಡವರೆ; ಬೇನಾಮಿ ಆಸ್ತಿನೆಲ್ಲ ಜಮೀನಿಲ್ದೋರಿಗೆ ಎರಡು ಎಕರೆಯಂತೆ ಹಂಚಿ ಬಿಡ್ತಾರಂತೆ! ಈಗಂತೂ ಸಿಕ್ಕಿದೋರಿಗೆ ಸೀರುಂಡೆ.
ಹೀಗಿತ್ತು ದೇಶದ ನಾಯಕತ್ವದ ಗುಣಗಾನ ಬಡವರ ಆನಂದ, ಪುನಃ ಮುಂದುವರಿಸುತ್ತಾ;
ಆದರೇನೋ ಕೂಲಿನಾಲಿ ಬಿಟ್ಟು ಬಿಸಿಲ ಬೇಗೆಲಿ ನಿಲ್ಲವುದು ಮಾತ್ರ ಸಹಿಸಕಾಗೋಲ್ಲ; ಏನಪ್ಪಾ ಒಳ್ಳೆದಾದರೆ ಸರಿ ಎಂದರು. ಹೌದು ಅಂದು ಇಂದಿರಾಗಾಂಧಿ ಆರಂಭದ ಕಾಲ ಗರೀಬಿ ಹಠಾವ್, ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಒಡೆಯ, ರಾಜಧನ ರದ್ದು, ಅಡವಿ ಪರಿಸರ ಕಾಯ್ದೆ, ಲೇವಾದೇವಿ ನಿರ್ನಾಮ ಎಲ್ಲವೂ ಈ ದೇಶದ ಬಡವರ ಪರ ಸಂಭ್ರಮದ ಸಮೂಹ ವ್ಯಾಮೋಹದಲ್ಲಿದ್ದವು.
ನಾನಾಗ ಹುಡುಗ. ಹಾಸನದಲ್ಲಿ ಇಂದಿರಾ ಬರುವಿಗಾಗಿ ನಡು ರಾತ್ರಿಯಲ್ಲಿ ಜನ ಸಾಗರದ ನಡುವೆ ಕಾಯ್ದು ಕುಳಿತಿದ್ದ ನೆನಪು. ತುರ್ತು ಪರಿಸ್ಥಿತಿ ಬಡವರ ಪರವಾಗಿತ್ತು ನಿಜ ಆದರೆ ಪ್ರಜಾಪ್ರಭುತ್ವ ತತ್ವಕ್ಕೆ ವಿರುದ್ಧವಾಗಿತ್ತು. ಆದರೂ ಈ ಸ್ಥಿತಿ ಪುನಃ ಮತಪೆಟ್ಟಿಗೆಯಲ್ಲಿ ಆಕೆಯನ್ನೇ ನಂಬಿತು. ಅದು ಖಲಿಸ್ಥಾನದ ಉಸಿರು ನಿಲ್ಲಿಸಿದ್ದುಂಟು. ಅದರೊಳಗೆ ಆಕೆಯ ಉಸಿರು ನಿಂತಿದ್ದುಂಟು. ಬಾಂಗ್ಲಾ ತಲೆ ಎತ್ತಿ ಸ್ವತಂತ್ರವಾದುದುಂಟು. ಆಕೆಯ ಪುತ್ರನ ಅಭಿವೃದ್ಧಿಶೀಲ ನಡಿಗೆಗೆ ಗುಂಡು ತಾಗಿದ್ದುಂಟು. ಇದೆಲ್ಲ ಚರಿತ್ರೆ.
ಈ ದೇಶದ ಬಡವರನ್ನು, ರೈತರನ್ನು ನಂಬಿಸುವುದು ಸುಲಭ. ಅದು ಪ್ರಭುತ್ವದಲ್ಲಿ ಪ್ರಾಮಾಣಿಕವಾಗಿದ್ದರೆ ಬಾಳಿಕೆ ಬರುತ್ತದೆ. ಪಾರದರ್ಶಕವಾಗಿದ್ದರೆ ಆ ಪ್ರಭುವಿನ ಚರಿತ್ರೆ ಉಳಿಯುತ್ತದೆ. ಗಾಂಧೀಜಿ ಜಗದೇಕ ಪ್ರಭುವಾಗಿ ಉಳಿದಿರುವುದು ಹೀಗೆ.
ಈಗ ಮೊಬೈಲೊಂದು ಅಂಗೈ ಮೇಲಿನ ಲಿಂಗ. ಮೋದಿ ಭಾಷಣದ ಆ್ಯಪ್ ಒಂದನ್ನು 2000 ರೂ. ನೋಟಿನ ಕೀಲಿ ಕೈ ಮಾಡಿ ತಯಾರಿಸಲಾಗಿದೆ. ಅದೊಂದು ತಂತ್ರ. ಅದೂ ಅಲ್ಲದೆ 2000 ರೂ. ನೋಟಿಗೆ ಯಾವುದೇ ಚಿಪ್ ಅಳವಡಿಸಿಲ್ಲ ಎಂದು ಸರಕಾರವೇ ಹೇಳಿದೆ. ಕಾಶ್ಮೀರ ಹಿಂದಿನ ಪ್ರಧಾನಿಯವರ ಆಡಳಿತದಲ್ಲಿ ಹತ್ತು ವರ್ಷ ಕಾಲ ಮೌನವಾಗಿತ್ತು. ಪ್ರವಾಸಿಗಳ ಗೆಳೆತನದಲ್ಲಿತ್ತು. ಉಗ್ರರ ಚಾಳಿ ಇರಲಿಲ್ಲವೆಂದಲ್ಲ. ಅದೊಂದು ಭಾಗವಾಗಿತ್ತು. ಕೋಟಾ ನೋಟು ಬರುತ್ತಿರಲಿಲ್ಲವೆಂದಲ್ಲ. ನೇಪಾಲ ಮೂಲದಲ್ಲಿ ಇದಕ್ಕಿಂತ ಹೆಚ್ಚಾಗಿ ಜಲಿಸಿ ಬರುತ್ತಿತ್ತು. ಮುಂದೆ ಕೂಡ ನಿಂತೇ ಹೋಗುತ್ತದೆಂಬ ಭರವಸೆಯೂ ಇಲ್ಲ.
ಕಾಶ್ಮೀರದಲ್ಲಿ ನಾಲ್ಕು ತಿಂಗಳಿಂದ ಕರ್ಫ್ಯೂನಲ್ಲಿ ಶಾಲೆಯನ್ನೇ ಮರೆತಿದ್ದ ಮಕ್ಕಳು, ಈಚೆಗೆ ತಲೆ ತೋರಲು ಹೆದರುತ್ತಿದ್ದ ಹಿರೀಕರು ಮೊನ್ನೆ ಸೆಕ್ಷನ್ 144 ತೆಗೆದಾಕ್ಷಣ ಓಡಾಡುತ್ತಾ ಶಾಲೆಗೆ ಹೊಟ್ಟೆ ಬಟ್ಟೆಗೆ ತಡಕಾಡುತಿದ್ದುದು ಕಾಳಧನವನ್ನು ಸ್ಥಗಿತಗೊಳಿಸಿದ ಪವಾಡವೆಂದು ಮುಗ್ಧರು ನಂಬಬಹುದು. ಅರ್ಥಶಾಸ್ತ್ರಜ್ಞರು ನಂಬುವುದಿಲ್ಲ.
ಕಾಳಧನ ನಿಯಂತ್ರಣವು ಪ್ರಭುತ್ವದ ಒಂದು ಮಾದರಿ. ಅದು ಪ್ರಜೆಗಳನ್ನು ಆಕರ್ಷಣೆಗೊಡ್ಡುವ ಚುನಾವಣಾ ತಂತ್ರವಾಗಬಾರದಷ್ಟೆ. ‘ಈ ಸರ್ವ ಸಮಭಾಗ ಹೇಗೆ ಆಗಬೇಕು ಲೋಕದಲ್ಲಿ? ಕ್ರಾಂತಿಯಿಂದಲೇ, ದಂಗೆಯಿಂದಲೇ, ರಕ್ತಪಾತದಿಂದಲೇ? ಹಣವಂತರ ಸಂಪತ್ತನ್ನೆಲ್ಲ ಬಲಾತ್ಕಾರವಾಗಿ ಕಿತ್ತುಕೊಂಡು ಬಿಡೋಣವೇ? ಕೂಡದು ಎನ್ನುತ್ತದೆ ಅಹಿಂಸೆ’ ಇದು ಗಾಂಧಿ ಹೇಳುವ ಆರ್ಥಿಕ ತತ್ವ. ಹಾಗಾಗಿಯೇ ಗಾಂಧಿ ಭಾರತ ದೇಶದ ತುಂಬಾ ಬಿಸಿಲಿನಲ್ಲಿ ಸರದಿ ಸಾಲಿನಲ್ಲಿ ನಿಂತಿದೆ.?? ದಂಗೆ ಎದ್ದೀತು ಜೋಕೆ? ಎಂದು ಸರ್ವೋಚ್ಚ ನ್ಯಾಯಾಲಯ ಎಚ್ಚರಿವಷ್ಟು ದೇಶದ ಒಡಲಲ್ಲಿ ಬೆಂಕಿ ಅಡಗಿದೆ. ಅದು ಜಲಾಗ್ನಿ. ಗಾಂಧಿ-ಬುದ್ಧರು ನೀಡಿದ ಸಂಯಮದ ಅಗ್ನಿ.
ಈ ನಡುವೆ ಮುಗ್ಧರನ್ನು ಸೋಮಾರಿಗಳನ್ನು ಕಾಳಹಣ ಪರಿವರ್ತಿಸುವ ಆಯುಧಗಳನ್ನಾಗಿ ಉಳ್ಳವರು ಉಪಯೋಗಿಸುತ್ತಿದ್ದಾರೆ. ಸರಕಾರಕ್ಕೆ ಬರುವ ಕನಿಷ್ಠ ಶೇ. 30 ಆದಾಯ ತಪ್ಪುತ್ತಿದೆ. ಹೋದ ತಿಂಗಳವರೆಗೂ ನೇರ ಬದಲಾವಣೆಗೆ ಹೀಗೆ ಅವಕಾಶವಿತ್ತು. ಪುನಃ ಅದೇ ರೀತಿ ನಿರ್ದಿಷ್ಟ ಅವಧಿವರೆಗೆ ಮುಂದುವರಿಸಿದರೆ ಲಾಭವೋ ನಷ್ಟವೋ? ತ್ವರಿತವಾಗಿ ಆರ್ಥಿಕ ತಜ್ಞರು ಸಲಹೆ ನೀಡಬೇಕು.
‘ಹೂವಿನಿಂದ ದುಂಬಿ ಮಕರಂದ ಹೀರುವಂತೆ ತೆರಿಗೆ ಸಂಗ್ರಹಿಸಬೇಕು’ ಎಂಬುದು ಕೌಟಿಲ್ಯನ ತಂತ್ರ. ಇದೇ ಚಾಣಕ್ಯನ ತಂತ್ರದಲ್ಲಿ ದೇವರ ಹಿಂದೆ ಕುಳಿತು ಗುಂ ಎಂದು ಬಾವಿಯೊಳಗೆ ಕುಳಿತು ಗುಂಗುಂ ಎಂದು ಹೆದರಿಸಿದರೆ ಖಜಾನೆಗೆ ಹಣ ಬರುತ್ತದೆಂಬ ಅರ್ಥಶಾಸ್ತ್ರವೂ ಈ ದೇಶದಲ್ಲಿ ನಡೆದಿದೆ. ಅದು ಪ್ರಜಾಪ್ರಭುತ್ವದ ನೀತಿಯಲ್ಲ.
ಸಾಮಾನ್ಯವಾಗಿ ದೇಶದ ಅರ್ಥವ್ಯವಸ್ಥೆಯನ್ನು ಬಂಗಾರದ ಸಮತೂಕದಲ್ಲಿ ಮಾಪನ ಮಾಡಲಾಗುತ್ತದೆ. ದೇಶೀ ಪದ್ಧತಿಯಲ್ಲಿ ಹಿತ್ತಾಳೆ, ತಾಮ್ರ, ಕಂಚು, ಮಣ್ಣು, ಮರ ಹಾಗೂ ಮಣ್ಣಲ್ಲಿ ಅರಳುವ ಕುಂಬಾರಿಕೆ, ಕಮ್ಮಾರಿಕೆ, ನೂಲುಗಾರಿಕೆ ಇವು ಜಗಲಿ ಮೇಲಿನ ಅರ್ಥಶಾಸ್ತ್ರಗಳು. ಇವೇ ಈ ದೇಶಕ್ಕೆ ಬೇಕಾಗಿದ್ದ ತತ್ವಗಳು. ಅವು ಈಗ ಹಳಿ ತಪ್ಪಿವೆ. ಕಾಳಧನ ಭೂಮಿಯನ್ನು ವಾಮನ ಹೆಜ್ಜೆಯೊಳಗೆ ಅಧೀನಗೊಳಿಸಿದೆ. ಮುಂಬೈಯಿಂದ ಅಹ್ಮದಾಬಾದಿಗೆ ಹಳಿ ಮೇಲೆ ಓಡುವ ಬುಲೆಟ್ ರೈಲುಗಳಲ್ಲಿ ಶ್ರೀಸಾಮಾನ್ಯನ ಅರ್ಥ ವ್ಯವಸ್ಥೆಗಳಿಲ್ಲ. ಅದಕ್ಕೆ ಬೇಕಾಗುವ ಒಂದು ಲಕ್ಷ ಕೋಟಿ ಹಣವು ಗ್ರಾಮದ ಆರೋಗ್ಯಕ್ಕೆ ಸ್ವದೇಶಿ ಶಿಕ್ಷಣಕ್ಕೆ ಬಳಸಿದಾಗ ಮಾತ್ರ ‘ಪ್ರಜಾಪ್ರಭುತ್ವ ನಿಧಾನಕ್ಕೆ ಬೆಳೆವ ಸಸ್ಯ’ ದಂತೆ ಪಲ್ಲವಿಸಬಲ್ಲದು.
ನಮಗೆಲ್ಲ ತಿಳಿದಿರುವಂತೆ 1970 ರ ದಶಕದಲ್ಲಿ ದೊಡ್ಡ ಅಧಿಕಾರಿ ಸಂಬಳ ಕೂಡ ಒಂದು ಸಾವಿರ ಧಾಟಿರಲಿಲ್ಲ. ಕೂಲಿ ಹತ್ತು ರೂಪಾಯಿ ಮೀರಿರಲಿಲ್ಲ. ಈ ದುಡಿಮೆಯ ಶೇ. 50 ಭಾಗ ಮಣ್ಣಿನಲ್ಲಿ ದುಡಿವ ರೈತನಿಗೆ ದಕ್ಕುತ್ತಿತ್ತು. ಈ ಅರಿವೇ ಗ್ರಾಮೀಣ ಅರ್ಥಶಾಸ್ತ್ರ. ಭೂಮಿಯೇ ಎಂದರೆ ಕೃಷಿಯೇ ಸಾಮ್ರಾಜ್ಯದ ಅಡಿಪಾಯವಾಗಿರುತ್ತದೆ’ ಎಂದು ನೆಪೋಲಿಯನನೇ ಹೇಳಿದ್ದಾನೆ. ‘ನಾವು ವಾಸ್ತವವಾಗಿ ಪ್ರಗತಿಯಿಂದ ಅಸ್ತವ್ಯಸ್ತ ರಾಶಿಯಾಗಿ ಪರಿಣಮಿಸಿದ್ದೇವೆ’ ಎಂದು ಗಾಂಧೀಜಿ ಅರ್ಥಶಾಸ್ತ್ರ ಹೇಳುತ್ತದೆ.
ಅದೀಗ ಹಿಂದಿರುಗಲಾರದಷ್ಟು ದೂರ ಹೋಗಿದೆ ನಿಜ. ಈ ಭೂಮಿ ತಿರುಗಣಿಯಾಗಿ ದಿನಾ ಬೆಣ್ಣೆ ಕಡೆವ ಮಂತು. ಒಳಿತನ್ನು ಪುನಃ ಸೃಷ್ಟಿ ಮಾಡಿಕೊಳ್ಳುವ ಶಕ್ತಿ ಭೂಮಿಗಿದೆ. ಲೋ ಕಾರ್ಬನ್ ಎಕಾನಮಿ (ಐಅಇ) ಈಗ ಜಗತ್ತಿನ ಮಂತ್ರ. ಇದು ಭೂಮಿಯನ್ನು ಮನುಷ್ಯನನ್ನು ಏಕ ಕಾಲದಲ್ಲಿ ಹಸನು ಮಾಡುವ ಅರ್ಥಶಾಸ್ತ್ರ.
ಕೃಷಿ ಮಣ್ಣಿಗೆ ಜೀವವುಂಟು. ಈ ಮಣ್ಣಿನಲ್ಲಿ ಊರಿದ ದೇಶೀ ಬೀಜಗಳು ಬೆಳೆವಬಲ್ಲವೇ ಹೊರತು ವಿದೇಶಿ ಬೀಜಗಳು ಕೈಗಾರಿಕಾ ಬೀಜಗಳು ತೈಲದೊಳು ಮಿಂದೆದ್ದ ಕಾಳುಕಡ್ಡಿ ಸಡಗರಗಳು ಬೆಳೆಯುವುದಿಲ್ಲ. ಅವು ಉರುಳುತ್ತವೆ. ಉರುಳುತ್ತಲೆ ಅತ್ತ ಹಿಮಾಲಯದಿಂದ ಇತ್ತ ಸಾಗರದವರೆಗೆ ನೆಲ ನೀರು ಮಲಿನಗೊಳಿಸಿಬಿಡುತ್ತವೆ.