×
Ad

ಧಾರಾವಿ: ಟೇಲರ್‌ಗಳ ಬದುಕು ಹರಿದ ನೋಟುಬಂದಿ

Update: 2016-12-11 09:06 IST

ಮುಂಬೈ, ಡಿ.11: ಮಿರಿ ಮಿರಿ ಮಿಂಚುವ ಶೆರ್ವಾನಿಗಳು ತಯಾರಾಗುವ ಧಾರಾವಿಗೆ ಇದೀಗ ಮಂಕು ಕವಿದಿದೆ. ದೇಶದ ವಿವಿಧೆಡೆಗಳಿಂದ ವಲಸೆ ಬಂದು, ಶೆರ್ವಾನಿ ಹೊಲಿಯುವ ಮೂಲಕ ಬದುಕು ಕಟ್ಟಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದ ದರ್ಜಿಗಳು ಇದೀಗ ಹುಟ್ಟೂರಿಗೆ ವಾಪಸ್ಸಾಗಿದ್ದಾರೆ. ಇದು ನೋಟುಬಂದಿಯ ನೇರ ಪರಿಣಾಮ. ನೋಟುಬಂದಿ ಪರಿಣಾಮವಾಗಿ ವೈಭವೋಪೇತ ಮದುವೆಗಳಿಗೆ ಕಡಿವಾಣ ಬಿದ್ದಿರುವುದರಿಂದ ಇವರ ದುಡಿಯುವ ಹಕ್ಕನ್ನೇ ಕಸಿದುಕೊಂಡಂತಾಗಿದೆ.

ಕುರ್ತಾ ಹಾಗೂ ಶೆರ್ವಾನಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ಇಲ್ಲಿನ ಟೇಲರ್‌ಗಳಿಗೆ ಅಕ್ಟೋಬರ್‌ನಿಂದ ಜನವರಿ ವರೆಗೆ ಸುಗ್ಗಿಕಾಲ. ಆದರೆ ನೋಟುಬಂದಿ ಬಳಿಕ ಬೇಡಿಕೆ ಕುಸಿದಿರುವುದರಿಂದ ಇವರ ವೃತ್ತಿಗೇ ಕುತ್ತು ಬಂದಿದೆ. ಏಷ್ಯಾದ ಅತಿದೊಡ್ಡ ಕೊಳಗೇರಿ ಎನಿಸಿಕೊಂಡ ಧಾರಾವಿ ಆರ್ಥಿಕ ಶಕ್ತಿ ಕೇಂದ್ರ ಕೂಡಾ. ಸ್ಥಳೀಯ ಉತ್ಪಾದಕರ ಪ್ರಕಾರ 5 ಸಾವಿರ ಚರ್ಮದ ಘಟಕಗಳು, ನಾಲ್ಕು ಸಾವಿರ ಸಿದ್ಧ ಉಡುಪು ಘಟಕಗಳು ಈ ಕಿಷ್ಕಿಂದೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಕಳೆದ ಕೆಲ ತಿಂಗಳಲ್ಲಿ ಶೇಕಡ 80-90 ಗುಡಿ ಕೈಗಾರಿಕೆಗಳು ಮುಚ್ಚಿವೆ ಎನ್ನುವುದು ಉದ್ಯೋಗಿಗಳ ಅನಿಸಿಕೆ.

ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದಿಂದ ವಲಸೆ ಬಂದು ಇಲ್ಲಿ ವರ್ಷದ ಹಲವು ತಿಂಗಳು ಕಾರ್ಯನಿರ್ವಹಿಸುವ ಸಾವಿರಾರು ದರ್ಜಿಗಳು ಇದ್ದಾರೆ. ಇಲ್ಲಿ ಸಿದ್ಧವಾದ ಉಡುಪುಗಳನ್ನು ಸಗಟು ಮಾರಾಟಗಾರರಿಗೆ ಪೂರೈಸಲಾಗುತ್ತದೆ. ಅಂತೆಯೇ ಚರ್ಮದ ಜಾಕೆಟ್, ಬ್ಯಾಗ್, ವ್ಯಾಲೆಟ್, ಬೆಲ್ಟ್ ಕೂಡಾ ತಯಾರಾಗುವ ಈ ಪ್ರದೇಶ ಹಲವು ಡಿಸೈನರ್ ಬ್ರಾಂಡ್‌ಗಳ ಕಾರ್ಯಶಾಲೆ.

ನಗದು ಹಾಗೂ ವೇತನ ಇಲ್ಲದಿರುವುದರಿಂದ ಈಗ ಬಟ್ಟೆ ಅಥವಾ ಚರ್ಮದ ವಸ್ತುಗಳಿಗೆ ಬೇಡಿಕೆಯೇ ಇಲ್ಲ. ಬಹುತೇಕ ವಲಸಿಗರಿಗೆ ಬ್ಯಾಂಕ್ ಖಾತೆಗಳಿಲ್ಲ. ನಗದು ವಹಿವಾಟಿನಲ್ಲೇ ತೊಡಗಿಸಿಕೊಂಡಿದ್ದ ಇಂಥ ವಲಸಿಗರು ಕಂಗಾಲಾಗಿದ್ದಾರೆ.

ದಿನಕ್ಕೆ ಮೂರು ಸಾವಿರ ಉಡುಪುಗಳನ್ನು ಸಿದ್ಧಪಡಿಸಿ, 1-2 ಲಕ್ಷ ವಹಿವಾಟು ನಡೆಸುತ್ತಿದ್ದ ನಮ್ಮ ಸಂಸ್ಥೆ ಇದೀಗ ಮುಚ್ಚಿದೆ. ಇಂಥ ಶೇಕಡ 90ರಷ್ಟು ಘಟಕಗಳಿಗೂ ಇದೇ ಗತಿ ಎಂದು ತನ್-ಮನ್ ಡ್ರೆಸಸ್ ಮಾಲಕ ಬಬ್ಬೂ ಖಾನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News