ಕೊಲೆ ರಹಸ್ಯ ಬೇಧಿಸಿದ ಟ್ಯಾಟೂ
ಹೊಸದಿಲ್ಲಿ, ಡಿ.11: ದಕ್ಷಿಣ ದಿಲ್ಲಿಯ ಚರಂಡಿಯಲ್ಲಿ ಶಿರಚ್ಛೇದವಾದ ದೇಹವೊಂದು ಸಿಕ್ಕಿತ್ತು. ದೇಹದಲ್ಲಿ ಎರಡು ಟ್ಯಾಟೂಗಳಿದ್ದವು. ಎಡಗೈನಲ್ಲಿದ್ದ ಒಂದರಲ್ಲಿ ಮೂರು ನಕ್ಷತ್ರ ಗುರುತು ಇದ್ದರೆ, ಸೊಂಟದಲ್ಲಿದ್ದ ಇನ್ನೊಂದರಲ್ಲಿ ಸರಪಣಿಯಿಂದ ಬಿಗಿದ ಎಲೆ. ಇದು ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಗೆ ನೆರವಾಗುವ ಜತೆಗೆ, ಹಂತಕರನ್ನು ಹಿಡಿಯಲು ಕೂಡಾ ಸಹಕಾರಿಯಾಗಿದೆ.
ಈ ಹಚ್ಚೆ ಆಧಾರದಲ್ಲಿ ಪೊಲೀಸರು, ಮಹಿಳೆ ಸೇರಿದಂತೆ ಈ ಕೃತ್ಯದಲ್ಲಿ ಷಾಮೀಲಾದ ಇಬ್ಬರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅತಿಯಾದ ಆಸೆ, ದ್ವೇಷ ಹಾಗೂ ವಿಶ್ವಾಸದ್ರೋಹ ಇದಕ್ಕೆ ಕಾರಣ ಎಂದು ಪೊಲೀಸರು ತನಿಖೆ ವೇಳೆ ಕಂಡುಕೊಂಡಿದ್ದಾರೆ. ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಭಾರತ-ನೇಪಾಳ ಗಡಿಯಲ್ಲಿ ಪತ್ತೆ ಮಾಡಲಾಗಿದೆ.
ಟ್ಯಾಟೂ ಇದ್ದ ಈ ದೇಹವಲ್ಲದೇ, ಮುಖವನ್ನು ಜಜ್ಜಿ ಕೊಲೆ ಮಾಡಲಾದ ಇನ್ನೊಂದು ದೇಹ ವಸಂತ ವಿಹಾರ್ ಬಾಬಾಗಣನಾಥ್ ಮಾರ್ಗ್‌ನ ದೇವಾಲಯವೊಂದರ ಬಳಿ ಕಂಡುಬಂದಿತ್ತು. ಈ ದೇಹಗಳ ಪತ್ತೆಗಾಗಿ ಸಾರ್ವಜನಿಕ ನೋಟಿಸ್‌ಗಳನ್ನು ಪೊಲೀಸರು ಬಿಡುಗಡೆ ಮಾಡಿದರು. ನಾಲ್ಕು ದಿನದ ಬಳಿಕ, ಟ್ಯಾಟೂ ಇದ್ದ ದೇಹ ಸೋನಂ ಎಂಬ 24 ವರ್ಷದ ಮಹಿಳೆಯದ್ದು ಎಂದು ಯುವಕನೊಬ್ಬ ಪತ್ತೆ ಮಾಡಿದ. ಈಕೆ ನ್ಯೂ ಜಲಪೈಗುರಿಯ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಸೋನಂ ಅವರ ಸಹೋದರಿಯಿಂದ ತನಗೆ ಕರೆ ಬರುತ್ತಿತ್ತು. ಎರಡು ದಿನಗಳಿಂದ ಈ ಸಂಖ್ಯೆ ಇದೀಗ ವ್ಯಾಪ್ತಿ ಪ್ರದೇಶದ ಹೊರಗಿದೆ ಎಂದು ಪೊಲೀಸರಿಗೆ ತಿಳಿಸಿದ. ಸೋನಂ ಚಲನವಲನಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ, ಆಕೆ ವಾಸವಾಗಿದ್ದ ಅಪಾರ್ಟ್‌ಮೆಂಟ್‌ಗೆ ತೆರಳಿದರು. ಆಕೆ ಅಲ್ಲಿ ನೈಸಾ ಎಂಬ ಮಹಿಳೆ ಜತೆಗೆ ವಾಸ ಇದ್ದರು. ಎರಡನೇ ದೇಹ ಮೂಲತಃ ನೇಪಾಳದವಳಾಗಿದ್ದ ನೈಸಾಳದ್ದು ಎನ್ನುವುದು ಆ ಬಳಿಕ ಖಚಿತವಾಯಿತು.