ಗುರುಗ್ರಾಮದಲ್ಲಿ ಮಾಲಿನ್ಯ ತಡೆಗೆ ಹೊಸ ವಿಧಾನ ಏನು ಗೊತ್ತೇ?
ಗುರುಗಾಂವ್, ಡಿ.11: ಮಿತಿಮೀರಿದ ಮಾಲಿನ್ಯ ತಡೆಗೆ ಸರಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಮಾಲಿನ್ಯದಿಂದ ತತ್ತರಿಸಿರುವ ಗುರುಗಾಂವ್‌ನ ಜನ ಇದೀಗ ಶುದ್ಧಗಾಳಿಗಾಗಿ ಆಧ್ಯಾತ್ಮದ ಮೊರೆ ಹೋಗಿದ್ದಾರೆ.
ಗುರುಗಾಂವ್ ಸೆಕ್ಟರ್ 33ರಲ್ಲಿ ಸ್ಥಳೀಯ ನಿವಾಸಿಗಳು ಶುಕ್ರವಾರ ಒಟ್ಟು ಸೇರಿ ಗಾಳಿ ಶುದ್ಧಗೊಳಿಸಲು ಹೋಮ ನಡೆಸಿದರು. ಗಾಳಿ ಶುದ್ಧ ಮಾಡಲು ಪೂರಕ ಎನ್ನಲಾದ ಹಲವು ವಸ್ತುಗಳನ್ನು ಬೆಂಕಿಗೆ ಹಾಕಿ, ಶುದ್ಧಗಾಳಿ ನೀಡುವಂತೆ ದೇವರಿಗೆ ಪ್ರಾರ್ಥನೆಯನ್ನೂ ಸಲ್ಲಿಸಿದರು. ಡಿಸೆಂಬರ್ 31ರೊಳಗಾಗಿ 100ಕ್ಕೂ ಹೆಚ್ಚು ಕಡೆಗಳಲ್ಲಿ ಇಂಥ ಹೋಮ ಮಾಡಲು ಸ್ಥಳೀಯರು ನಿರ್ಧರಿಸಿದ್ದಾರೆ. ಸಮಾಜದ ವಿವಿಧ ಸ್ತರಗಳ ಜನರಲ್ಲಿ ಇದರಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
"ಪರಿಸರದ ಸಂರಕ್ಷಣೆ ಮತ್ತು ಶುದ್ಧ ಪರಿಸರ ಸೃಷ್ಟಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹವನ ನಡೆಸಲಾಗಿದೆ. ಮಾಲಿನ್ಯ ಹಾಗೂ ಅದರ ಹಾನಿಕಾರಕ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಇದರ ಉದ್ದೇಶ" ಎಂದು ನಿಸ್ವಾರ್ಥ ಕದಂ ಎಂಬ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥ ಪ್ರಮೋದ್ ರಾಘವ್ ವಿವರಿಸಿದರು. ಆದರೆ ಹೋಮ ನಡೆಸಿದ ಪುರೋಹಿತರು ಇದಕ್ಕೆ ವಿರುದ್ಧವಾಗಿ, ಈ ಹೋಮಕ್ಕೆ ಗಾಳಿ ಶುದ್ಧಗೊಳಿಸುವ ಶಕ್ತಿ ಇದೆ ಎಂದು ಪ್ರತಿಪಾದಿಸಿದರು.
ಮಾಲಿನ್ಯ ನಿಯಂತ್ರಿಸಲು ಸರ್ಕಾರ ವಿಫಲವಾಗಿರುವುದರಿಂದ ಹತಾಶರಾಗಿರುವ ಐಟಿ ಉದ್ಯೋಗಿ ಸುಶಾಂತ್ ಮಿಶ್ರಾ, "ಇದೀಗ ದೇವರೇ ನಮ್ಮನ್ನು ಮಾಲಿನ್ಯದಿಂದ ಕಾಪಾಡಬೇಕು. ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳುವ ಬದಲು ಸರ್ಕಾರ ಮರಗಳ ಮಾರಣಹೋಮ ಮುಂದುವರಿಸಿದೆ" ಎಂದು ಹೇಳಿದರು.