ಮೂರು ಟಿವಿ ಚಾನೆಲ್ ಗಳಿಗೆ ವಾರ್ತಾ ಇಲಾಖೆಯ ಎಚ್ಚರಿಕೆ

Update: 2016-12-14 03:55 GMT

ಹೊಸದಿಲ್ಲಿ, ಡಿ.14: ಮೂರು ಟೆಲಿವಿಷನ್ ಚಾನೆಲ್ಗಳಲ್ಲಿ ಪ್ರಸಾರವಾದ ಸುದ್ದಿಗಳು ಪ್ರಸಾರ ನಿಯಮಾವಳಿಗೆ ಅನುಗುಣವಾಗಿಲ್ಲ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನೇಮಕ ಮಾಡಿದ್ದ ಅಂತರ ಸಚಿವಾಲಯ ಸಮಿತಿ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಮೂರು ಚಾನೆಲ್ಗಳಿಗೆ ಎಚ್ಚರಿಕೆ ನೀಡಲಾಗಿದೆ.
ಮೊದಲ ಪ್ರಕರಣದಲ್ಲಿ, ಕೇರಳದಲ್ಲಿ ನಡೆದ ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಭಯಾನಕ ದೃಶ್ಯಾವಳಿಯನ್ನು ಪ್ರಸಾರ ಮಾಡಿದೆ ಎಂದು ಆಕ್ಷೇಪಿಸಿ, ನವೆಂಬರ್ 29ರಂದು ಎಚ್ಚರಿಕೆ ನೋಟಿಸ್ ನೀಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಹತ್ಯೆ ಪ್ರಕರಣದಲ್ಲಿ ಸಂತ್ರಸ್ತನೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿರುವ ಚಿತ್ರವನ್ನು ಬ್ಲರ್ ಮಾಡದೇ ಹಾಗೆಯೇ ಪ್ರಸಾರ ಮಾಡಿದ್ದಕ್ಕಾಗಿ ನವೆಂಬರ್ 29ರಂದೇ ಮತ್ತೊಂದು ಚಾನೆಲ್ಗೆ ಎಚ್ಚರಿಕೆ ನೀಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಚಾನೆಲ್ಗೆ ಎಚ್ಚರಿಕೆ ನೀಡಲಾಗಿದೆ. ಇದು ಪ್ರಸಾರ ನಿಯಮಾವಳಿಯನ್ನು ಉಲ್ಲಂಘಿಸಿದೆ ಎಂದು ಸಚಿವಾಲಯ ನೋಟಿಸ್‌ನಲ್ಲಿ ಹೇಳಿದೆ. ಪಠಾಣ್‌ಕೋಟ್ ದಾಳಿ ಪ್ರಕರಣದ ವರದಿಯ ಸಂಬಂಧ ಎನ್‌ಡಿಟಿವಿಗೆ ಒಂದು ದಿನದ ನಿಷೇಧ ಹೇರಲು ನಿರ್ಧಾರ ಕೈಗೊಂಡ ಬೆನ್ನಲ್ಲೇ ಈ ಎಚ್ಚರಿಕೆ ನೀಡಿರುವುದು ಗಮನಾರ್ಹ. ಎನ್‌ಡಿಟಿವಿ ಪ್ರಕರಣದಲ್ಲಿ ಸಚಿವಾಲಯದ ನಿರ್ಧಾರದ ವಿರುದ್ಧ ಚಾನೆಲ್ ಸುಪ್ರೀಂಕೋರ್ಟ್‌ನ ಮೊರೆ ಹೋಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News