×
Ad

ಜಯಲಲಿತಾ ಸಾವಿನ ರಹಸ್ಯ ಶೀಘ್ರ ಬಹಿರಂಗ ?

Update: 2016-12-14 15:51 IST

ಹೊಸದಿಲ್ಲಿ,ಡಿ.14: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅನಾರೋಗ್ಯದಿಂದಾಗಿ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾದವರು ಜೀವಂತವಾಗಿ ಹೊರಗೆ ಬರಲಿಲ್ಲ. ಅವರ ಪೋಯೆಸ್ ಗಾರ್ಡನ್ ನಿವಾಸಕ್ಕೆ ವಾಪಸಾಗಿದ್ದು ಅವರ ಪಾರ್ಥಿವ ಶರೀರ ಮಾತ್ರ. ಉಸಿರಾಟದ ತೊಂದರೆ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಯನ್ನು ರಹಸ್ಯವಾಗಿಯೇ ಇಡಲಾಗಿತ್ತು. ಅವರು ಬಹು ಅಂಗಾಂಗಗಳ ವೈಫಲ್ಯಕ್ಕೆ ಗುರಿಯಾಗಿದ್ದಾರೆ ಎಂದು ಅಪೋಲೊ ಆಸ್ಪತ್ರೆ ತನ್ನ ಬುಲೆಟಿನ್‌ನಲ್ಲಿ ತಿಳಿಸಿತ್ತಾದರೂ ಆ ಬಳಿಕ ನಿಯಮಿತವಾಗಿ ಬುಲೆಟಿನ್‌ಗಳನ್ನು ಹೊರಡಿಸುವ ಗೋಜಿಗೇ ಹೋಗಿರಲಿಲ್ಲ.  ಎಡಿಎಂಕೆ ಪಕ್ಷವೂ ತನ್ನ ನಾಯಕಿಯ ಆರೋಗ್ಯದ ಬಗ್ಗೆ ನಿಖರವಾದ ಮಾಹಿತಿಗಳನ್ನು ಬಹಿರಂಗಗೊಳಿಸಿರಲಿಲ್ಲ. ಎಲ್ಲವೂ ಜಯಲಲಿತಾರ ಆಪ್ತ ಗೆಳತಿ ಶಶಿಕಲಾರ ನಿರ್ದೇಶದ ಮೇರೆಗೇ ನಡೆಯುತ್ತಿತ್ತು. ಜಯಲಲಿತಾ ಸಾಯುವ ಮುನ್ನಾದಿನ,ಅವರು ಚೇತರಿಸಿ ಕೊಂಡಿದ್ದಾರೆ ಮತ್ತು ಅವರನ್ನು ಐಸಿಯುನಿಂದ ವಿಶೇಷ ವಾರ್ಡಿಗೆ ಸ್ಥಳಾಂತರಿಸಲಾಗಿದೆ ಎಂದು ಅಪೋಲೊ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿತ್ತು. ಮರುದಿನವೇ ರಾತ್ರಿ ಜಯಲಲಿತಾ ಕೊನೆಯುಸಿರೆಳೆದಿದ್ದರು. ಹೃದಯ ಸ್ತಂಭನ ಅವರ ಸಾವಿಗೆ ಕಾರಣ ಎಂದು ಹೇಳಲಾಗಿದೆಯಾದರೂ ಜನರ ಪಾಲಿಗೆ ಈ ಸಾವು ಇನ್ನೂ ನಿಗೂಢವಾಗಿದೆ. ಈ ನಿಗೂಢತೆ ಶೀಘ್ರವೇ ಬಯಲಾಗಲಿದೆಯೇ? ‘ಲೀಜನ್’ ಹೆಸರಿನ ಹ್ಯಾಕರ್‌ಗಳ ಗುಂಪು ಅಪೋಲೊ ಆಸ್ಪತ್ರೆಯ ಸರ್ವರ್‌ಗೆ ಕನ್ನ ಹಾಕಿದೆ ಎಂಬ ವರದಿಗಳು ಹೊಸ ವಿವಾದವನ್ನು ಸೃಷ್ಟಿಸಿವೆ. ಈ ವರದಿ ನಿಜವೇ ಆಗಿದ್ದಲ್ಲಿ ಲೀಜನ್ ಜಯಲಲಿತಾರ ಸಾವಿನ ಹಿಂದಿನ ಕಾರಣಗಳನ್ನು ಶೀಘ್ರವೇ ಬಹಿರಂಗಗೊಳಿಸಬಹುದು.

ಲೀಜನ್ ಈಗಾಗಲೇ ಕಾಂಗ್ರೆಸ್ ಪಕ್ಷ, ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ, ವಿವಾದಾಸ್ಪದ ಮಾಜಿ ಮದ್ಯದ ದೊರೆ ವಿಜಯ ಮಲ್ಯ ಮತ್ತು ತೀರ ಇತ್ತೀಚಿಗೆ ಟಿ.ವಿ.ಪತ್ರಕರ್ತರಾದ ಬರ್ಖಾ ದತ್ ಮತ್ತು ರವೀಶ್‌ಕುಮಾರ್ ಅವರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದು,ಕೊನೆಗೂ ಈ ಗುಂಪು ಬಹಿರಂಗಕ್ಕೆ ಬಂದಿದೆ. ಪತ್ರಕರ್ತರೊಂದಿಗೆ ತನ್ನ ಕಿತಾಪತಿಗಳ ಬಗ್ಗೆ ಹೇಳಿಕೊಂಡಿದೆ.

ಗೂಢಲಿಪಿಯ ಇನ್‌ಸ್ಟಂಟ್ ಮೆಸೇಜಿಂಗ್ ಸಾಫ್ಟವೇರ್ ಮೂಲಕ ಸೋಮವಾರ ಅಮೆರಿಕದ ‘ದಿ ವಾಷಿಂಗ್ಟನ್ ಪೋಸ್ಟ್ ’ಗೆ ಸಂದರ್ಶನ ನೀಡಿರುವ ಲಿಜನ್ ಅಪೋಲೊ ಹಾಸ್ಪಿಟಲ್‌ನಂತಹ ಹಲವಾರು ಸರ್ವರ್‌ಗಳನ್ನು ತಾನು ಭೇದಿಸಿದ್ದೇನೆ ಮತ್ತು ಈ ಸರ್ವರ್‌ಗಳಲ್ಲಿಯ ಮಾಹಿತಿಗಳು ಭಾರತದಲ್ಲಿ ‘ಕೋಲಾಹಲ’ವನ್ನುಂಟು ಮಾಡಬಹು ದಾದ್ದರಿಂದ ಅವುಗಳನ್ನು ಬಿಡುಗಡೆ ಮಾಡುವ ಬಗ್ಗೆ ತನಗೇ ಖಚಿತತೆಯಿಲ್ಲ ಎಂದು ಹೇಳಿದೆ.

  ಕೆಲವು ವಾರಗಳ ಹಿಂದಿನವರೆಗೂ ಲಿಜನ್‌ಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿಯಿರಲಿಲ್ಲ. ಎಲ್ಲ ‘ಆಸಕ್ತಿ’ಗಳಿಗೆ ಸಂಬಂಧಿಸಿದ ಹಲವಾರು ಟೆರಾಬೈಟ್‌ಗಳಷ್ಟು ಕಚ್ಚಾ ಮಾಹಿತಿ ಈಗ ಗುಂಪಿನ ಬಳಿಯಿದೆ. ಈ ಮಾಹಿತಿಗಳನ್ನು ಜಾಲಾಡುತ್ತಿದ್ದಾಗ ಭಾರತದಲ್ಲಿ ಸಾರ್ವಜನಿಕ ರಂಗದಲ್ಲಿರುವ ಹಲವಾರು ಜನರಿಗೆ ಸಂಬಂಧಿಸಿದ ಬಹಳಷ್ಟು ಮಾಹಿತಿಗಳನ್ನು ನಾವು ಗುರುತಿಸಿದ್ದೇವೆ ಎಂದು ‘ಎಲ್‌ಸಿ’ ಎಂದು ಗುರುತಿಸಿಕೊಂಡ ಲಿಜನ್ ಗುಂಪಿನ ಸದಸ್ಯನನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ. ಭಾರತದಲ್ಲಿಯ 40,000ಕ್ಕೂ ಅಧಿಕ ಸರ್ವರ್‌ಗಳನ್ನು ನಾವು ಭೇದಿಸಿದ್ದೇವೆ ಎಂದೂ ಆತ ಹೇಳಿಕೊಂಡಿದ್ದಾನೆ ಎಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ವಿದೇಶ ವ್ಯವಹಾರಗಳ ಕುರಿತು ಬರೆಯುತ್ತಿರುವ ಮ್ಯಾಕ್ಸ್ ಬೇಯರ್ಕ್ ತಿಳಿಸಿದರು.

ತನ್ನ ಮುಂದಿನ ಗುರಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಎಂದು ಲಿಜನ್ ಗುಂಪು ಎಚ್ಚರಿಕೆ ನೀಡಿದೆ. ಬಹು ದೊಡ್ಡ ವಿಷಯಗಳ ಮೇಲೆ ನಾವು ಕಣ್ಣಿರಿಸಿದ್ದೇವೆ ಎಂದು ಎಲ್‌ಸಿ ಸುಳಿವು ನೀಡಿದ್ದಾನೆ ಎಂದು ವರದಿಯು ತಿಳಿಸಿದೆ.

ಭಾರತದಿಂದ ಟ್ವಿಟರ್ ಖಾತೆಗಳಿಗೆ ಕನ್ನ ಹಾಕಿರುವ ಲಿಜನ್ ಗುಂಪು ಮುಂಬರುವ ವಾರಗಳಲ್ಲಿ ತಾನು ಇನ್ನಷ್ಟು ಇಂತಹ ಕನ್ನಗಳನ್ನು ಹಾಕಲಿದ್ದೇನೆ ಮತ್ತು ತನಗೆ ಜನರ ಬೆಂಬಲ ಬೇಕು ಎಂದು ಕೋರಿದೆ. ಬೆಂಬಲವನ್ನು ವ್ಯಕ್ತಪಡಿಸಲು ತನ್ನ ಇ-ಮೇಲ್ ಐಡಿಯನ್ನೂ ಅದು ಒದಗಿಸಿದೆ.

ಲಿಜನ್‌ಗೆ ಬೆಂಬಲಿಸಿ. ಈ ಕ್ರಿಮಿನಲ್(ಭಾರತದ ಸಾರ್ವಜನಿಕ ರಂಗದಲ್ಲಿರುವ ವ್ಯಕ್ತಿಗಳು)ಗಳನ್ನು ಕಾನೂನಿನ ಶಿಕ್ಷೆಗೊಳಪಡಿಸಲು ಅಗತ್ಯ ಮಾಹಿತಿಯನ್ನು ನಾವು ನಿಮಗೆ ಒದಗಿಸುತ್ತೇವೆ ಎಂದು ಅದು ಹೇಳಿದೆ. ಈಗ ನಾವು ಬಹಿರಂಗಗೊಳಿಸಿರುವುದು ಸ್ವಲ್ಪ ಮಾತ್ರ. ಮುಂಬರುವ ವಾರಗಳಲ್ಲಿ ಇನ್ನಷ್ಟು ಮಾಹಿತಿಗಳು ಹೊರಬರಲಿವೆ ಎಂದು ಅದು ಟ್ವೀಟೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News