ಮುಂಬೈ ಮುನಿಸಿಪಲ್ ಚುನಾವಣೆಯಲ್ಲಿ ಶಿವಸೇನೆ ಏಕಾಂಗಿ ಸ್ಪರ್ಧೆ ?

Update: 2016-12-18 04:53 GMT

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಹರಿಹಾಯ್ದಿರುವ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಮುಂಬರುವ ಮುಂಬೈ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಖ್ಯ ತೊರೆದು ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದ ವೇಳೆ ನಾಗ್ಪುರದಲ್ಲಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಭಾರತೀಯ ಜನತಾ ಪಕ್ಷದ ಬಲವರ್ಧನೆಯನ್ನು ಶಿವಸೇನೆ ಮನಗಂಡಲ್ಲಿ ಮತ್ತು ಪಕ್ಷದ ವಿಷನ್ ಡಾಕ್ಯುಮೆಂಟ್ ಅನ್ನು ಶಿವಸೇನೆ ಸ್ವೀಕರಿಸಿದಲ್ಲಿ ಮಾತ್ರ ಮುಂಬೈ ಚುನಾವಣೆ ವೇಳೆ ಶಿವಸೇನೆ ಜತೆ ಮೈತ್ರಿ ಸಾಧ್ಯ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದನ್ನು ಠಾಕ್ರೆ ಕಟುವಾಗಿ ಟೀಕಿಸಿದರು.

ಮುಖ್ಯಮಂತ್ರಿ ಹೇಳಿಕೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, "ಅವರ ವಿಷನ್ ಡಾಕ್ಯುಮೆಂಟ್ ಅವರಿಗೆ ಇರಲಿ. ಅದು ನಮಗೆ ಸಂಬಂಧಿಸಿದ್ದಲ್ಲ. ನಮ್ಮ ಪಕ್ಷದ ಪ್ರಾಬಲ್ಯಕ್ಕೆ ಧಕ್ಕೆ ತರುವ ಬಿಜೆಪಿ ಪ್ರಯತ್ನವನ್ನು ನಮ್ಮ ಕಾರ್ಯಕರ್ತರು ಸಹಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಮುಂಬೈನ ಮಾಟುಂಗದಲ್ಲಿ ಪಕ್ಷದ ಸಂಸದ ಸಂಜಯ್ ರಾವುತ್ ಅವರ ಸಂಕಲನ ಸಾಚಿಗೆ ಚಾಲನೆ ನೀಡಿ ಮಾತನಾಡಿದ ಠಾಕ್ರೆ, ಅಲ್ಲೂ ಬಿಜೆಪಿ ಮೇಲಿನ ವಾಗ್ದಾಳಿ ಮುಂದುವರಿಸಿದರು. ನೋಟು ಅಮಾನ್ಯಗೊಳಿಸಿದ ಪ್ರಧಾನಿ ಮೋದಿ ವಿರುದ್ಧವೂ ಠಾಕ್ರೆ ವಾಗ್ಬಾಣ ಬಿಟ್ಟರು. "ಜನರಿಗೆ ಆಗಿರುವ ತೊಂದರೆ 50 ದಿನಗಳಲ್ಲಿ ಸರಿಹೋಗುತ್ತದೆ ಎಂದು ಅವರು ಹೇಳಿದ್ದರು. ಆದರೆ ಇದು ಕೇವಲ ಕಣ್ಣೀರು ಒರೆಸುವ ಹೇಳಿಕೆ ಎನ್ನುವುದು ಈಗ ದೃಢಪಟ್ಟಿದೆ. ಜನರ ತೊಂದರೆಗಳಿಗೆ ಕೊನೆಯೇ ಇಲ್ಲದಾಗಿದೆ" ಎಂದು ಠಾಕ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News