×
Ad

ಕೊಹ್ಲಿಯೊಂದಿಗೆ ಹೋಲಿಸಿಕೊಂಡು ಅಭಿಮಾನಿಗಳ ಟೀಕೆಗೆ ಗುರಿಯಾದ ಶಹಝಾದ್

Update: 2016-12-22 23:46 IST

 ಹೊಸದಿಲ್ಲಿ, ಡಿ.22: 2016ರ ಋತುವಿನಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿರುವ ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸ್ವತಃ ತನ್ನನ್ನು ಹೋಲಿಸಿಕೊಂಡಿರುವ ಪಾಕಿಸ್ತಾನದ ನಿರ್ಲಕ್ಷಿತ ಕ್ರಿಕೆಟಿಗ ಅಹ್ಮದ್ ಶಹಝಾದ್ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ.

  ನೋಟದಲ್ಲಿ ಹಾಗೂ ರನ್ ಗಳಿಸುವಲ್ಲಿ ಕೊಹ್ಲಿಯೊಂದಿಗೆ ತನ್ನನ್ನು ತಾನು ಹೋಲಿಸಿಕೊಂಡಿರುವ ಬಲಗೈ ಆರಂಭಿಕ ದಾಂಡಿಗ ಶಹಝಾದ್ ನಗೆಪಾಟಲಿಗೆ ಈಡಾದರು. ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಬಳಿಕ ಪಾಕಿಸ್ತಾನ ತಂಡದಿಂದ ಗೇಟ್‌ಪಾಸ್ ಪಡೆದಿರುವ ಶಹಝಾದ್ ಹಲವು ಬಾರಿ ಅಶಿಸ್ತಿನ ವರ್ತನೆಗೆ ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಆಯ್ಕೆಗಾರರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ.

   ‘‘ತನ್ನ ತಂಡ ಹಾಗೂ ಅಭಿಮಾನಿಗಳಿಂದ ಬಹಳಷ್ಟು ಬೆಂಬಲ ಸಿಗುತ್ತಿದ್ದರೆ ತಾನು ವಿರಾಟ್ ಕೊಹ್ಲಿ, ಜೋ ರೂಟ್ ಹಾಗೂ ಕೇನ್ ವಿಲಿಯಮ್ಸನ್‌ರಂತೆ ಆಗುತ್ತಿದ್ದೆ. ಆ ವಿಷಯದಲ್ಲಿ ತಾನು ನತದೃಷ್ಟ’’ ಎಂದು ಶಹಝಾದ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಪಾಕಿಸ್ತಾನದ ಕ್ರಿಕೆಟ್ ಪತ್ರಕರ್ತ ಸಾಜ್ ಸಾದಿಕ್, ಶಹಝಾದ್ ಬೇರೊಬ್ಬರೊಂದಿಗೆ ತನ್ನನ್ನು ಹೋಲಿಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

‘‘ಜನ ಬೆಂಬಲ ಬಯಸುತ್ತಿರುವ ಶಹಝಾದ್‌ರನ್ನು ನವಾಝ್ ಶರೀಫ್ ಬದಲಿಗೆ ಪಾಕ್‌ನ ಪ್ರಧಾನಿ ಮಾಡಬೇಕು’’ ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾನೆ. ‘‘ಪಾಕ್ ಕ್ರಿಕೆಟಿಗನೊಬ್ಬ ತನ್ನನ್ನು ತಾನು ಇತರ ದೇಶದ ಮೂವರು ಆಟಗಾರನೊಂದಿಗೆ ಹೋಲಿಸಿಕೊಳ್ಳುವುದು ತಲೆ ತಗ್ಗಿಸುವ ವಿಚಾರ’’ ಎಂದು ಅಬ್ದುಲ್ಲಾ ರಾಣಾ ಎಂಬಾತ ಟ್ವೀಟ್ ಮಾಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News