ಎಬಿ ವಾಜಪೇಯಿಗೆ 92ನೆ ಹುಟ್ಟುಹಬ್ಬ
ಹೊಸದಿಲ್ಲಿ, ಡಿ.25: ಕ್ರಿಸ್‌ಮಸ್ ದಿನದಂದೇ 92ನೆ ಜನ್ಮದಿನ ಆಚರಿಸಿದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ನಿವಾಸಕ್ಕೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶುಭಾಶಯ ಕೋರಿದರು.
ಇದಕ್ಕೆ ಮೊದಲು ಮೋದಿ ಅವರು ಸರಣಿ ಟ್ವೀಟ್ ಮಾಡಿ ವಾಜಪೇಯಿ ಆರೋಗ್ಯ ಚೆನ್ನಾಗಿರಲಿ ಎಂದು ಹಾರೈಸಿದರು. ವಾಜಪೇಯಿ ಅವರನ್ನು ಭೇಟಿಯಾಗಿ ಆಲಿಂಗಿಸಿಕೊಂಡಿರುವ ವಿಡಿಯೋವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
1924ರಲ್ಲಿ ಗ್ವಾಲಿಯರ್‌ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿರುವ ವಾಜಪೇಯಿ 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. 5 ವರ್ಷಗಳ ಆರ್‌ಎಸ್‌ಎಸ್ ಪ್ರಚಾರಕರಾಗಿದ್ದರು. ಜನಸಂಘದ(ಈಗಿನ ಬಿಜೆಪಿ) ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು.
ವಾಜಪೇಯಿ 1996ರಲ್ಲಿ ಮೊದಲ ಬಾರಿ ಪ್ರಧಾನಮಂತ್ರಿ ಆಗಿದ್ದರು. ಆದರೆ, ಇತರ ಪಕ್ಷಗಳಿಂದ ಬೆಂಬಲ ಪಡೆಯಲು ವಿಫಲವಾಗಿ 13 ದಿನಗಳಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 1998ರಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ನಡೆದ ಚುನಾವಣೆಯ ಬಳಿಕ ಮತ್ತೊಮ್ಮೆ ಪ್ರಧಾನಿಯಾಗಿದ್ದರು.
2014ರಲ್ಲಿ ಮಾ.19 ರಂದು ಭಾರತರತ್ನ ಪ್ರಶಸ್ತಿಗೆ ಭಾಜನರಾಗಿದ್ದ ವಾಜಪೇಯಿ 1999-2000ರಲ್ಲಿ 3ನೆ ಬಾರಿ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ್ದರು. ಐದು ವರ್ಷಗಳ ಕಾಲ ಸರಕಾರ ನಡೆಸಿದ ಕಾಂಗ್ರೇಸ್ಸೇತರ ಮೊದಲ ಪ್ರಧಾನಿ ಎನಿಸಿಕೊಂಡರು. ವಿಶ್ವಸಂಸ್ಥೆಯ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿರುವ ಭಾರತದ ಮೊದಲ ವಿದೇಶಿ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ನಿತೀಶ್‌ಕುಮಾರ್‌ರಿಂದ ಶುಭಾಶಯ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರವಿವಾರ ಮಾಜಿ ಪ್ರಧಾನಿ ಎಬಿ ವಾಜಪೇಯಿಗೆ 92ನೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ವಾಜಪೇಯಿ ಅವರಿಗೆ ದೀರ್ಘ ಆರೋಗ್ಯ, ಆಯುಷ್ಯ ಲಭಿಸಲಿ ಎಂದು ಹಾರೈಸುವೆನು ಎಂದು ಸಂದೇಶದಲ್ಲಿ ನಿತೀಶ್ ಹೇಳಿದ್ದಾರೆ.
ನಿತೀಶ್ ಕುಮಾರ್ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದಲ್ಲಿ 1998 ಹಾಗೂ 2004ರ ನಡುವೆ ರೈಲ್ವೇಸ್, ಕೃಷಿ ಹಾಗೂ ಭೂ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.