×
Ad

ಫೋನ್‌ನಲ್ಲಿ ವೀಡಿಯೊ ರೆಕಾರ್ಡಿಂಗ್ ಚಾಲೂ ಇಟ್ಟು ಆತ್ಮಹತ್ಯೆಗೆ ಶರಣಾದ

Update: 2016-12-25 17:32 IST

ಥಾಣೆ,ಡಿ.25: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರನಾಥ್ ನಿವಾಸಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ತನ್ನ ಮೊಬೈಲ್ ಫೋನ್‌ನ್ನು ವೀಡಿಯೊ ರೆಕಾರ್ಡಿಂಗ್ ಸ್ಥಿತಿಯಲ್ಲಿರಿಸಿ ತನ್ನ ಆತ್ಮಹತ್ಯೆ ದೃಶ್ಯವನ್ನು ಚಿತ್ರೀಕರಿಸಿದ್ದಾನೆ. ಜೊತೆಗೆ ತನ್ನದೇ ಧ್ವನಿಯಲ್ಲಿ ಆತ್ಮಹತ್ಯಾ ಹೇಳಿಕೆಯನ್ನೂ ದಾಖಲಿಸಿದ್ದಾನೆ. ತನ್ನ ಆತ್ಮಹತ್ಯೆಗೆ ತನ್ನ ಸೊಸೆ ಮತ್ತು ಆಕೆಯ ಕುಟುಂಬ ಕಾರಣವೆಂದು ಆತ ದೂರಿದ್ದಾನೆ.

ಅಂಬರನಾಥ್‌ನ ಭಾಸ್ಕರನಗರ ನಿವಾಸಿ ಬಾಬು ಶೇಖ್(50) ಮೃತವ್ಯಕ್ತಿ. ಅವರ ಪುತ್ರ ಕಳೆದ ತಿಂಗಳಷ್ಟೇ ಮದುವೆಯಾಗಿ ಸೊಸೆ ಮನೆಗೆ ಬಂದಿದ್ದಳು. ಆದರೆ ಶೇಖ್ ಕುಟುಂಬ ಮತ್ತು ಸೊಸೆಯ ನಡುವೆ ಆಗಾಗ್ಗೆ ಜಗಳಗಳು ನಡೆಯತೊಡಗಿದ್ದವು.

ಒಂದು ಸಂದರ್ಭದಲ್ಲಿ ಮಾವ ಬಾಬು ಶೇಖ್ ಜೊತೆಯೇ ಜಗಳವಾಡಿದ್ದ ಆಕೆ ಬಳಿಕ ನೇರವಾಗಿ ತವರುಮನೆಗೆ ತೆರಳಿ ಅಲ್ಲಿಯೇ ಉಳಿದುಕೊಂಡಿದ್ದಳು.

ಡಿ.22ರಂದು ರಾತ್ರಿ ಮೊಬೈಲ್‌ನಲ್ಲಿ ವೀಡಿಯೊವನ್ನು ಹೇಗೆ ಚಿತ್ರೀಕರಿಸುವುದು ಎನ್ನುವುದನ್ನು ಕಿರಿಯ ಮಗನಿಂದ ತಿಳಿದುಕೊಂಡಿದ್ದ ಬಾಬು ಶೇಖ್ ಮಲಗಲೆಂದು ನೆರೆಯ ಅಪಾರ್ಟ್‌ಮೆಂಟ್‌ನಲ್ಲಿರುವ ತನ್ನ ಕೋಣೆಗೆ ತೆರಳಿದ್ದರು.

ಮರುದಿನ ಬೆಳಿಗ್ಗೆ ಕುಟುಂಬ ಸದಸ್ಯರು ಬಾಬು ಶೇಖ್‌ರನ್ನು ಎಬ್ಬಿಸಲೆಂದು ತೆರಳಿದ್ದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಬಾಗಿಲು ಒಡೆದು ಒಳಪ್ರವೇಶಿಸಿದಾಗ ಬಾಬು ಶೇಖ್ ಸೀಲಿಂಗ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತನ್ನ ತಂದೆ ಮೊಬೈಲ್‌ನಲ್ಲಿ ವೀಡಿಯೊ ರೆಕಾರ್ಡಿಂಗ್ ಬಗ್ಗೆ ಕೇಳಿದ್ದು ನೆನಪಾದಾಗ ಕಿರಿಯ ಪುತ್ರ ಪೋನ್‌ನ್ನು ಪರಿಶೀಲಿಸಿದಾಗ ತಂದೆಯ ಆತ್ಮಹತ್ಯೆಯ ದೃಶ್ಯ ಅದರಲ್ಲಿ ದಾಖಲಾಗಿರುವುದು ಕಂಡು ಬಂದಿತ್ತು, ಜೊತೆಗೆ ಆಡಿಯೋ ರೂಪದಲ್ಲಿದ್ದ ಅವರ ಆತ್ಮಹತ್ಯಾ ಹೇಳಿಕೆ ಕೂಡ. ತನ್ನ ಸೊಸೆ,ಆಕೆಯ ತಂದೆ ಮತ್ತು ಅಣ್ಣ ತನ್ನ ಹೆಸರಿಗೆ ಮಸಿ ಬಳಿದಿದ್ದಾರೆ. ತನ್ನ ನಡತೆಯ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದ್ದರು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊ ಳ್ಳುತ್ತಿದ್ದೇನೆ ಎಂದು ಬಾಬು ಶೇಖ್ ಸಾಯುವ ಮುನ್ನ ಹೇಳಿದ್ದಾರೆ.

ಬಾಬು ಶೇಖ್ ಹೆಸರಿಸಿರುವ ಮೂವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರಾದರೂ, ಈವರೆಗೆ ಯಾರನ್ನೂ ಬಂಧಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News