ಮಮತಾ ಬ್ಯಾನರ್ಜಿ ಹೇಳಿಕೆಗೆ ತೇಜಸ್ವಿ ಯಾದವ್ ಬೆಂಬಲ
Update: 2016-12-28 10:49 IST
ಪಾಟ್ನಾ, ಡಿ.28: ನೋಟು ನಿಷೇಧ ಮಾಡಿರುವ ಕೇಂದ್ರ ಸರಕಾರ ದೇಶದಲ್ಲಿ ‘ಸೂಪರ್ ಎಮರ್ಜೆನ್ಸಿ’ ಪರಿಸ್ಥಿತಿಯನ್ನು ಹುಟ್ಟುಹಾಕಿದೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಕ್ಕೆ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಧ್ವನಿಗೂಡಿಸಿದ್ದಾರೆ.
ಗರಿಷ್ಠ ಮೊತ್ತದ ನೋಟು ನಿಷೇಧದ ಬಳಿಕ ಇಡೀ ದೇಶದ ಪರಿಸ್ಥಿತಿ ಕೆಟ್ಟು ಹೋಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರವಸೆ ನೀಡಿರುವ ಪ್ರಕಾರ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವನ್ನು ನೀಡಿಲ್ಲ. ನಗರದಿಂದ ದೂರ ವಿರುವ ಎಟಿಎಂ ಸಹಿತ ಆಧುನಿಕ ವ್ಯವಸ್ಥೆಗಳಿಲ್ಲದ ಪ್ರದೇಶಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಇದು ಇಲ್ಲಿಗೆ ಮುಗಿದಿಲ್ಲ ಎಂದು ಪ್ರಧಾನ ಮಂತ್ರಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರು ಹೇಳಿರುವ ಪ್ರಕಾರ ದೇಶದಲ್ಲಿ ಎಮರ್ಜೆನ್ಸಿ ಅಲ್ಲ ‘ಸೂಪರ್ ಎಮರ್ಜೆನಿ’್ಸ ಪರಿಸ್ಥಿತಿ ಉಂಟಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.